ಅಪರಿಚಿತ ವಾಹನ ಢಿಕ್ಕಿ: ಟಿಪ್ಪರ್ ಚಾಲಕ ಮೃತ್ಯು
ಕಾರ್ಕಳ, ಸೆ.26: ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ಚಾಲಕರೊಬ್ಬರು ಮೃತಪಟ್ಟ ಘಟನೆ ಸೆ.25ರಂದು ರಾತ್ರಿ ವೇಳೆ ಸಾಣೂರು ಗ್ರಾಮದ ಪುಲ್ಕೇರಿ ವಿಶಾಲ್ ಬಸ್ ಗ್ಯಾರೇಜ್‌ನ ಎದುರುಗಡೆ ನಡೆದಿದೆ.
ಮೃತರನ್ನು ಸುಧಾಕರ ಎಂದು ಗುರುತಿಸಲಾಗಿದೆ. ಇವರು ತನ್ನ ಟಿಪ್ಪರ್ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸುಧಾಕರ ಅವರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಸುಧಾಕರ್, ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಅಪಘಾತವೆಸಗಿದ ವಾಹನವನ್ನು ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.