ಉಡುಪಿ: ಎಲ್ಲಾ ಧರ್ಮಗಳೂ ಒಳಿತನ್ನು ಮಾಡಬೇಕು ಎಂಬುದನ್ನೇ ಸಾರುತ್ತವೆ. ‘ನಮ್ಮ ಧರ್ಮವೇ ಶ್ರೇಷ್ಠ’ ಎಂಬ ಭಾವನೆ ಧಾರ್ಮಿಕತೆಯಲ್ಲ, ಅದು ಅಹಂಕಾರ. ವ್ಯಕ್ತಿಯ ಅಹಂಕಾರಕ್ಕೆ ಧರ್ಮದ ಲಾಂಛನವನ್ನು ಅಂಟಿಸುವುದು ಸರಿಯಲ್ಲ. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಗೌರವಿಸುತ್ತಾ, ಇತರರ ಧರ್ಮಕ್ಕೂ ಗೌರವ ನೀಡುವ ಮೂಲಕ ಸೌಹಾರ್ದದಿಂದ ಬದುಕಬೇಕು ಎಂದು ಸಾಹಿತಿ, ರಂಗಕರ್ಮಿ ಯೋಗೇಶ್ ಮಾಸ್ಟರ್ ಹೇಳಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ನಗರ ಘಟಕದ ವತಿಯಿಂದ ಸೀರತ್ ಅಭಿಯಾನದ ಸಮಾರೋಪ ಸಮಾರಂಭದ ಅಂಗವಾಗಿ ಗುರುವಾರ ಉಡುಪಿ ಶೋಕಾ ಮಾತಾ ಇಗರ್ಜಿಯ ಡೋನ್ ಬಾಸ್ಕೋ ಹಾಲ್‌ನಲ್ಲಿ ಹಮ್ಮಿಕೊಳ್ಳಲಾದ ‘ಮಾನವತೆಗೆ ಜೀವಂತ ಮಾದರಿ ಪ್ರವಾದಿ ಮುಹಮ್ಮದ್(ಸ)’ ಎಂಬ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡಿ, ಜನರನ್ನು ವಿಭಜಿಸುವುದು ಧರ್ಮದ ಕೆಲಸವಲ್ಲ. ಮನುಷ್ಯರ ಮನಸ್ಸುಗಳನ್ನು ಒಡೆಯುವುದು ಯಾವುದೇ ಧರ್ಮದ ಬೋಧನೆಯಲ್ಲ. ಎಲ್ಲ ಧರ್ಮಗಳೂ ಪ್ರೀತಿ, ಕರುಣೆ, ನ್ಯಾಯ, ಸತ್ಯ ಮತ್ತು ಮಾನವೀಯತೆಯಂತಹ ಮೌಲ್ಯಗಳಿಗೆ ಮಹತ್ವ ನೀಡುತ್ತವೆ. ಆದ್ದರಿಂದ ಧರ್ಮದ ಹೆಸರಿನಲ್ಲಿ ಅಂತರ ಸೃಷ್ಟಿಸುವ ಬದಲು, ಧರ್ಮಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಂಡು ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಪ್ರವಾದಿ ಮುಹಮ್ಮದ್(ಸ) ಅವರ ಜೀವನವು ಕೇವಲ ಮುಸ್ಲಿಮರಿಗೆ ಸೀಮಿತವಾಗಿರದೆ, ಸಮಸ್ತ ಮಾನವ ಸಮಾಜಕ್ಕೆ ಹಲವು ಮೌಲ್ಯಗಳನ್ನು ನೀಡುವಂತಹದ್ದು. ಪ್ರೀತಿ, ಕರುಣೆ, ನ್ಯಾಯ, ಸತ್ಯ, ಕ್ಷಮೆ, ನೆರೆಹೊರೆಯವರ ಹಕ್ಕುಗಳ ಗೌರವ, ದುರ್ಬಲರು ಮತ್ತು ಬಡವರ ಬಗ್ಗೆ ಕಾಳಜಿ ಹಾಗೂ ಪ್ರತಿಯೊಬ್ಬರ ಮಾನವ ಘನತೆಯನ್ನು ಗೌರವಿಸುವಂತಹ ಮೌಲ್ಯಗಳು ಇಂದಿನ ಸಮಾಜಕ್ಕೂ ಅತ್ಯಂತ ಅಗತ್ಯವಾಗಿವೆ ಎಂದರು.

ಮುಖ್ಯ ಅತಿಥಿಯಾಗಿ ಉಡುಪಿಯ ಶೋಕಮಾತಾ ಇಗರ್ಜಿಯ ಧರ್ಮಗುರು ರೆ.ಫಾ.ಡೆನಿಸ್ ಡೆಸಾ ಮಾತನಾಡಿ, ರಾಜಕಾರಣಿಗಳು ಮಕ್ಕಳ ಮನಸ್ಸಿನಲ್ಲೂ ದ್ವೇಷದ ಬೀಜ ಬಿತ್ತಿದ್ದಾರೆ. ಹಿಂದೆ ಒಂದೇ ಬೆಂಚಿನಲ್ಲಿ ವಿವಿಧ ಧರ್ಮಗಳ ಮಕ್ಕಳು ಯಾವುದೇ ಭೇದಭಾವವಿಲ್ಲದೆ ಒಟ್ಟಿಗೆ ಕುಳಿತು ಕೊಳ್ಳುತ್ತಿದ್ದರು. ಆದರೆ ಇಂದು ಮಕ್ಕಳ ಮನಸ್ಸಿನಲ್ಲೇ ದ್ವೇಷ ತುಂಬುವಂತಹ ವಾತಾವರಣ ನಿರ್ಮಾಣವಾಗಿರುವುದು ಆತಂಕಕಾರಿ. ಮಕ್ಕಳು ಮುಂದೆ ದೊಡ್ಡವರಾದಾಗ ಸಮಾಜದ ಸ್ಥಿತಿ ಹೇಗಿರಬಹುದು ಎಂಬುದನ್ನು ನಾವು ಯೋಚಿಸಬೇಕಾಗಿದೆ ಎಂದು ಹೇಳಿದರು.

ಶಿಕ್ಷಕಿ ಹೆಲೆನ್ ಶಾಲೆಟ್ ಲುವಿಸ್ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ನಗರ ಅಧ್ಯಕ್ಷ ನಿಸಾರ್ ಅಹಮದ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಮೌಲಾನ ದಾನಿಷ್ ಕುರಾನ್ ಪಠಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಡಾ.ಶಾನವಾಝ್ ಸ್ವಾಗತಿಸಿದರು. ಉಪಾಧ್ಯಕ್ಷ ಮುಶೀರ್ ಅಹಮದ್ ಶೇಖ್, ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರ್ಫರಾಜ್ ಮನ್ನಾ ಕಾರ್ಯಕ್ರಮ ನಿರೂಪಿಸಿದರು. ಫೈಝ್ ಅಹಮದ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor