ಕುಂದಾಪುರ, ಸೆ.28: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ಬಿ.ಕಾಂ. ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅನುಭವ ಒದಗಿಸುವ ಉದ್ದೇಶದಿಂದ ವಂಡಾರಿನ ಶ್ರೀಕೃಷ್ಣಪ್ರಸಾದ್ ಕ್ಯಾಶ್ಯೂಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಬಲ್ಬೆಟ್ಟು, ಮಣೂರಿನ ಜುಬೇದಾ ಕಾರ್ಯ ಪ್ರಾಡಕ್ಟ್ಸ್ ಮತ್ತು ಜುಬೇದಾ ಪಾಲಿ ಸ್ಯಾಕ್ ಸಂಸ್ಥೆಗಳಿಗೆ ಅಧ್ಯಯನಾತ್ಮಕ ಕೈಗಾರಿಕಾ ಭೇಟಿ ಆಯೋಜಿಸಲಾಗಿತ್ತು.

ಶ್ರೀಕೃಷ್ಣಪ್ರಸಾದ್ ಕ್ಯಾಶ್ಯೂಸ್ ಪ್ರೈವೇಟ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ವಿಭಾಗದ ಚಂದ್ರಶೇಖರ್ ವಿದ್ಯಾರ್ಥಿ ಗಳಿಗೆ ಗೋಡಂಬಿ ಸಂಸ್ಕರಣಾ ಘಟಕದ ಕಾರ್ಯವೈಖರಿ, ಉತ್ಪಾದನಾ ಪ್ರಕ್ರಿಯೆ, ಗುಣಮಟ್ಟ ನಿಯಂತ್ರಣ, ಪ್ಯಾಕೇಜಿಂಗ್, ಸಂಗ್ರಹಣೆ ಹಾಗೂ ಮಾರುಕಟ್ಟೆ ವ್ಯವಸ್ಥೆಯ ಕುರಿತು ವಿವರವಾದ ಮಾಹಿತಿ ನೀಡಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಪತ್ ಶೆಟ್ಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಜುಬೇದಾ ಕಾರ್ಯ ಪ್ರಾಡಕ್ಟ್ಸ್ ಮತ್ತು ಜುಬೇದಾ ಪಾಲಿ ಸ್ಯಾಕ್ ಸಂಸ್ಥೆಗಳಲ್ಲಿ ಮುಮ್ತಾಜ್ ಅಲಿ ಹಾಗೂ ಮುಹಾಫಿಜ್ ಸಂಸ್ಥೆಗಳ ಕಾರ್ಯವೈಖರಿ ಮತ್ತು ಉತ್ಪಾದನಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಲ್ಲಿ ಕೈಗಾರಿಕಾ ಜ್ಞಾನ, ವೀಕ್ಷಣಾ ಕೌಶಲ್ಯ, ವೃತ್ತಿಪರ ಮನೋಭಾವ ಹಾಗೂ ಪ್ರಾಯೋಗಿಕ ಕಲಿಕೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಲು ಈ ಕೈಗಾರಿಕಾ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ. ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲೆ ಶಬೀನಾ ಹಂಝಾ ಕೈಗಾರಿಕಾ ಭೇಟಿಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ವಿನುತ ಯು.ಎನ್., ಉಪನ್ಯಾಸಕರಾದ ಕರುಣಾಕರ ಶೆಟ್ಟಿ, ನಾಗರಾಜ್, ಜಯಂತ್ ಕುಮಾರ್ ಹಾಗೂ ಆಶಿದಾ ಬಾನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor