ಕರಾವಳಿ ಹೈಕೋರ್ಟ್ ಸಂಚಾರಿ ಪೀಠ: ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿ ರಚನೆ
ಉಡುಪಿ, ಸೆ.29: ಕರಾವಳಿ ಹೈಕೋರ್ಟ್ ಸಂಚಾರಿ ಪೀಠ ರಚನೆಯ ಬಗ್ಗೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು 3 ನ್ಯಾಯ ಮೂರ್ತಿಗಳನ್ನೊಳಗೊಂಡ ಸಮಿತಿ ರಚಿಸಿ ಸುತ್ತೋಲೆ ಹೊರಡಿಸಿದ್ದಾರೆ. ಹೈಕೋರ್ಟ್‌ನ ಈ ಕ್ರಮವನ್ನು ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಉಡುಪಿ ಜಿಲ್ಲಾ ಸ್ವಾಗತಿಸಿದರು.
ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟವನ್ನು ಗಮನಿಸಿ ಹಾಗೂ ಮನವಿಗಳನ್ನು ಪುರಸ್ಕರಿಸಿ ಮಂಗಳವಾರ ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯ ಮೂರ್ತಿಗಳು ನ್ಯಾಯಮೂರ್ತಿ ಅನು ಶಿವರಾಮನ್, ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರನ್ನೊಳಗೊಂಡ ಮೂವರು ನ್ಯಾಯಾಮೂರ್ತಿಗಳ ಸಮಿತಿಯನ್ನು ರಚಿಸಿ, ಈ ಸಂಬಂಧ ಎಲ್ಲ ಪಾಲುದಾರರ ಜೊತೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಲು ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಈ ಕ್ರಮವನ್ನು ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ, ನ್ಯಾಯವಾದಿ ಪ್ರೇಮ್‌ಪ್ರಸಾದ್ ಶೆಟ್ಟಿ ಸ್ವಾಗತಿಸಿದ್ದಾರೆ. ಈ ಸಮಿತಿ ರಚನೆಯ ಘೋಷಣೆಯು ಕರಾವಳಿ ಪೀಠ ಸ್ಥಾಪನೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದ್ದು, ಅತೀ ಶೀಘ್ರದಲ್ಲಿ ಪೀಠ ಸ್ಥಾಪನೆ ಈಡೇರಲಿದೆ. ಈ ನಿಟ್ಟಿನಲ್ಲಿ ನಮ್ಮೊಂದಿಗೆ ಸಹಕರಿಸಿದ ವಿವಿಧ ಸಂಘ ಸಂಸ್ಥೆಗಳು, ವಕೀಲರ ಸಮೂಹ ಹಾಗೂ ಸಾರ್ವಜನಿಕರನ್ನು ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ಈ ನಮ್ಮ ಹೋರಾಟವನ್ನು ಇನ್ನಷ್ಟು ಸಂಘಟಿತವಾಗಿ ಮಾಡಬೇಕಾದ ಅವಶ್ಯಕತೆ ಇದ್ದು, ಸಮಿತಿಯ ಮುಂದೆ ನಮ್ಮ ನ್ಯಾಯ ಯೋಚಿತ ಬೇಡಿಕೆಯನ್ನು ಇಟ್ಟು ಅತೀ ಶೀಘ್ರದಲ್ಲಿ ಪೀಠ ಸ್ಥಾಪನೆಯಾಗು ವಂತೆ ನಾವು ಮನವಿ ಮಾಡಲಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.