ಮಲ್ಪೆ: ಗುಜರಿ ಹೆಕ್ಕುವ ಆಂಧ್ರ ಮೂಲದ ವ್ಯಕ್ತಿಯ ಕೊಲೆ; ಆರೋಪಿ ಪರಾರಿ
ಮಲ್ಪೆ, ಸೆ.29: ಗುಜರಿ ಹೆಕ್ಕಿಕೊಂಡು ಬದುಕುತ್ತಿದ್ದ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಸೆ.28ರಂದು ರಾತ್ರಿ ವೇಳೆ ಮಲ್ಪೆ ಬಾಬುತೋಟ ಧಕ್ಕೆಯ ಮೀನು ಬಾಕ್ಸ್ ಇಡುವ ಗೋಡನ್ ಬಳಿ ನಡೆದಿದೆ.
ಕೊಲೆಯಾದವರನ್ನು ಆಂಧ್ರಪ್ರದೇಶ ಮೂಲದ ಪರಮೇಶಿ ಯಾನೆ ಪರಮ್ ವೇಲಿ(55) ಎಂದು ಗುರುತಿಸಲಾಗಿದೆ. ಇವರು ಕಳೆದ 3 ಸುಮಾರು ವರ್ಷಗಳಿಂದ ಬಂದರು ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ಹೆಕ್ಕಿಕೊಂಡು ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಹೊತ್ತಿನ್ನಲ್ಲಿ ಖಾಲಿ ಜಾಗದಲ್ಲಿ ಪ್ಲಾಸ್ಟಿಕ್ ಗೋಣಿ ಚೀಲ ಹಾಕಿಕೊಂಡು ಮಲಗುತ್ತಿದ್ದನು.
ಸೆ.29ರಂದು ಬೆಳಿಗ್ಗೆ 8:30ರಂದು ಸ್ಥಳೀಯರು ಆ ಜಾಗದಲ್ಲಿ ಬಂದು ಪರಮೇಶಿ ಅಡ್ಡವಾಗಿ ಗೋಣಿಚೀಲದ ಮೇಲೆ ರಕ್ತದ ಮಡವಿನಲ್ಲಿ ಬಿದ್ದು ಕೊಂಡಿರುವುದು ಕಂಡುಬಂದಿದೆ. ಮೃತರ ಕುತ್ತಿಗೆಯ ಬಳಿಯಿಂದ ರಕ್ತ ಹರಿದು ನೆಲದ ಮೇಲೆ ಇದ್ದು, ಯಾರೋ ದುಷ್ಕರ್ಮಿಗಳು ಯಾವುದೋ ದ್ವೇಷದಿಂದ ಪರಮೇಶಿ ಕುತ್ತಿಗೆಯನ್ನು ಯಾವುದೋ ಆಯುಧದಿಂದ ಇರಿದು ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಈ ಜಾಗದಲ್ಲಿ ಹಲವು ಮಂದಿ ಅಪರಿಚಿತರು ಮಲಗುತ್ತಿದ್ದು, ಇವರು ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡು ಈ ಕೊಲೆ ಎಸಗಿರಬಹುದೆಂದು ಶಂಕಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.