ಮಲ್ಪೆ: ಆಂಧ್ರ ಮೂಲದ ವ್ಯಕ್ತಿಯ ಕೊಲೆ ಪ್ರಕರಣ: ಆರೋಪಿ ಬಂಧನ
ಆರೋಗ್ಯದಾಸ್
ಮಲ್ಪೆ, ಅ.4: ಮಲ್ಪೆಯ ಬಾಬುತೋಟ ಧಕ್ಕೆಯ ಬಳಿ ಸೆ.28ರ ರಾತ್ರಿ ನಡೆದ ಆಂಧ್ರಪ್ರದೇಶ ಮೂಲದ ಪರಮೇಶಿ ಪರಮ್ ವೇಲಿ(55) ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಮಲ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಆರೋಗ್ಯದಾಸ್ ಕಾಮಿ(55) ಬಂಧಿತ ಕೊಲೆ ಆರೋಪಿ. ಈತ ಸೆ.28ರಂದು ರಾತ್ರಿ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಬಂದರು ಪ್ರದೇಶದಲ್ಲಿ ಗುಜರಿ ಹೆಕ್ಕಿಕೊಂಡು ಬದುಕುತ್ತಿದ್ದ ಪರಮೇಶಿಯನ್ನು ಆತ ಮಲಗುವ ಸ್ಥಳದಲ್ಲಿ ಆಯುಧದಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು. ಸೆ.29ರಂದು ಬೆಳಗ್ಗೆ ಸ್ಥಳೀಯರು ನೋಡುವಾಗ ಪರಮೇಶಿ ಗೋಣಿ ಚೀಲದ ಮೇಲೆ ರಕ್ತದ ಮಡವಿನಲ್ಲಿ ಬಿದ್ದಿರುವುದು ಕಂಡುಬಂತು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಕಾರ್ಯಚರಣೆ ನಡೆಸಿ ಆರೋಪಿ ಯನ್ನು ಹುಬ್ಬಳ್ಳಿಯ ಹೊರ ವಲಯದಲ್ಲಿ ಬಂಧಿಸಿದರು. ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು.. ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಮಾರ್ಗದರ್ಶ ನದಲ್ಲಿ ಹಾಗೂ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಅನೀಲ್ ಕುಮಾರ ಡಿ ಹಾಗೂ ಸಿಬ್ಬಂದಿ ವಿಶ್ವನಾಥ, ಆದರ್ಶ, ಕುಬೇರ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.