ಯಕ್ಷಗಾನ ಕಲಾರಂಗದ 104ನೆ ಮನೆ ಹಸ್ತಾಂತರ
ಕಾಪು, ಅ.4: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿನಯ್ ಆಚಾರ್ಯ(ಲತಾ ಮತ್ತು ಗೋಪಾಲ ಆಚಾರ್ಯರ ಪುತ್ರ) ಅವರಿಗೆ ನಿಟ್ಟೆ ವಿಶ್ವವಿದ್ಯಾಲಯದ ನಿರ್ದೇಶಕ ಜಪಾನ್‌ನ ಅಲೆವೂರು ಹರಿಕೃಷ್ಣ ಭಟ್ ಮತ್ತು ಪತ್ನಿ ಯಸುಕೊ ಸತೊ ಪ್ರಾಯೋಜಕತ್ವದಲ್ಲಿ ಮುದರಂಗಡಿಯಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆ ಶಾಂತಿ ನಿಲಯ’ವನ್ನು ಶನಿವಾರ ಹರಿಕೃಷ್ಣ ಭಟ್ ದಂಪತಿ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲಾರಂಗದ ಪ್ರತಿಯೊಂದು ಕೆಲಸದಲ್ಲೂ ಸಮಾಜಕ್ಕೊಂದು ಸಂದೇಶವಿರುತ್ತದೆ. ಬಡವಿದ್ಯಾರ್ಥಿಗಳ ಕುರಿತು ಅವರು ಮಾಡುವ ಕೆಲಸ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಹಿರಿಯರಾದ ಎ.ರಘುಪತಿ ಭಟ್, ಗೋವಾ ರಾಜ್ಯ ಉನ್ನತ ಶಿಕ್ಷಣ ಸಮಿತಿ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ, ನಿಟ್ಟೆ ಯೂನಿವರ್ಸಿಟಿಯ ಸಹಾಯಕ ಪ್ರೊಫೆಸರ್ ಡಾ.ರಾಘವೇಂದ್ರ ಪೈ ಮಾತನಾಡಿದರು. ಮನೆಯ ಇಂಜಿನಿಯರ್ ಮುಬಾರಕ್ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ರಾಜಾರಾವ್-ವತ್ಸಲಾ ದಂಪತಿ, ಶೋಭಾ ಗೋಪಾಲ್ ಮುಗೇರಾಯ, ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಕೆ.ಸದಾಶಿವ ರಾವ್, ಸದಸ್ಯರುಗಳಾದ ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಯು.ಅನಂತರಾಜ ಉಪಾಧ್ಯ, ಭುವನಪ್ರಸಾದ ಹೆಗ್ಡೆ, ಡಾ.ರಾಜೇಶ್ ನಾವುಡ, ಮರ್ಣೆ ಉಮೇಶ ಭಟ್, ಎಲ್ಲೂರು ಗಣೇಶ ರಾವ್, ಆರ್.ವಸಂತ, ವಿಶ್ವನಾಥ, ವಿನೀತ್, ನಿವೃತ್ತ ಪ್ರಾಂಶುಪಾಲ ಶ್ರೀನಿವಾಸ ಪ್ರಭು, ಅದಮಾರು ಶಾಲಾ ಮುಖ್ಯೋಪಾಧ್ಯಾಯ ಶ್ರೀಕಾಂತ್ ಆಚಾರ್ಯ, ಉದ್ಯಮಿ ವೀರೇಂದ್ರ ಹೆಗ್ಡೆ ಉಪಸ್ಥಿತರಿದ್ದರು.
ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.