ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಡ್ಡಿ: ಅ.5ರಂದು ಗ್ರಾಮಸ್ಥರಿಂದ ಪ್ರತಿಭಟನೆ
ಶಿರ್ವ, ಅ.4: ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಕೇನೆಕುಂಜದ ಸರಕಾರಿ ಜಮೀನಿನಲ್ಲಿ ವಾರಾಹಿ ನದಿಯ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಜಲಜೀವನ್ ಮಿಷನ್‌ನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಪೂರೈಕೆ ಯೋಜನೆಗೆ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಸರಕಾರಿ ಜಾಗದಲ್ಲಿ ಕಾಮಗಾರಿ ಕೈಗೊಳ್ಳಲು ಅರಣ್ಯ ಇಲಾಖೆ ಅಡ್ಡಿ ಪಡಿಸಿದ್ದು ಇದರ ವಿರುದ್ಧ ಗ್ರಾಮಸ್ಥರು ಅ.5ರಂದು ಕೇನೆಕುಂಜ ಪರಿಸರದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಈ ಬೃಹತ್ ಯೋಜನೆಯ ಬೃಹತ್ ಮೊತ್ತದ ಸಾರ್ವಜನಿಕ ಹಣ ಪೈಪ್‌ಲೈನ್‌ಗಾಗಿ ವ್ಯಯವಾಗಿದ್ದು, ಈ ಓವರ್‌ಹೆಡ್ ಟ್ಯಾಂಕ್ ನಿರ್ಮಾಣವಾಗದಿದ್ದಲ್ಲಿ ಇಡೀ ಯೋಜನೆಯೇ ವ್ಯರ್ಥವಾಗಲಿದೆ. ಇದರಿಂದ ಬೆಳ್ಳೆ-ಕಟ್ಟಂಗೇರಿ ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಲಿದೆ ಎಂದು ಮೂಡುಬೆಳ್ಳೆ ನಾಗರಿಕ ಸಮಿತಿ ಅಧ್ಯಕ್ಷ ಸುಧಾಕರ ಪೂಜಾರಿ ಆರೋಪಿಸಿದ್ದಾರೆ.
ಅರಣ್ಯ ಇಲಾಖೆಯು ಈ ಟ್ಯಾಂಕ್ ನಿರ್ಮಾಣದ ಸ್ಥಳವು ಸರಕಾರಿ ಜಮೀನಾಗಿದ್ದರೂ ಹಾಗೂ ಕಾಮಗಾರಿಗಾಗಿ ಯಾವುದೇ ಮರವನ್ನು ಕಡಿಯುವ ಅಗತ್ಯ ಇಲ್ಲದೇ ಇರುವ ಸಂದರ್ಭದಲ್ಲಿಯೂ ಈ ಕಾಮಗಾರಿಯನ್ನು ನಿರ್ವಸಲು ಅಡೆತಡೆಯನ್ನು ಉಂಟು ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾಧಿಕಾರಿಗಳು ಈ ಪರಿಸ್ಥಿತಿಯ ತುರ್ತನ್ನು ಅರಿತುಕೊಂಡು, ಅರಣ್ಯ ಇಲಾಖೆಯು ತಿಂಗಳುಗಳಿಂದ ಈ ಬಗ್ಗೆ ತಾಳುತ್ತಿರುವ ವಿಳಂಬ ಧೋರಣೆಯ ಬಗ್ಗೆ ಪರಿಶೀಲಿಸಿ, ಕಂದಾಯ ಇಲಾಖೆ ಅಧಿಕಾರಿಗಳ ಸ್ಥಳ ಪರಿಶೀಲನಾ ವರದಿಯನ್ನು ಪಡೆದುಕೊಂಡು ಕೂಡಲೇ ಕಾಮಗಾರಿಯನ್ನು ಆರಂಭಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.