ಉಡುಪಿ, ಅ.5: ಚಲಿಸುತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿದ ಪ್ರಯಾಣಿಕರೊಬ್ಬರು ಆಯತಪ್ಪಿ ಹಳಿಗೆ ಬಿದ್ದು ಗಂಭೀರವಾಗಿ ಗಾಯ ಗೊಂಡು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ನಿವಾಸಿ ದಿನೇಶ್ (63) ಎಂದು ಗುರುತಿಸಲಾಗಿದೆ.

ದಿನೇಶ್ ಅವರು ಹೊಸದಿಲ್ಲಿಯ ನಿಝಾಮುದ್ದೀನ್ ಹಾಗೂ ಕೇರಳಂನ ಎರ್ನಾಕುಲಂ ನಡುವೆ ಸಂಚರಿಸುವ ರೈಲು ನಂ.12284 ದುರತೋ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತಿದ್ದರು. ಈ ರೈಲಿಗೆ ಉಡುಪಿ ನಿಲ್ದಾಣದಲ್ಲಿ ನಿಲುಗಡೆ ಇದ್ದಿರಲಿಲ್ಲ. ಕ್ರಾಸಿಂಗ್ ಉದ್ದೇಶಕ್ಕಾಗಿ ಮಾತ್ರ ಅಲ್ಪಸಮಯದ ನಿಲುಗಡೆ ಇತ್ತು.

ಆದರೆ ಇದಕ್ಕೆ ಮೊದಲೇ ರೈಲಿನ ವೇಗ ತಗ್ಗಿದಾಗ ದಿನೇಶ್ ಅವರು ತಾನಿದ್ದ ಬೋಗಿಯಿಂದ ಪ್ಲಾಟ್‌ಫಾರಂಗೆ ನೆಗೆದಿದ್ದು, ಆಯ ತಪ್ಪಿ ಹಳಿಯ ಬಳಿ ಬಿದ್ದಿದ್ದರು. ತಕ್ಷಣ ರೈಲ್ವೆ ವೈದ್ಯಕೀಯ ತಂಡ ಧಾವಿಸಿ ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಎತ್ತಿ ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಿತು. ಪರೀಕ್ಷಿಸಿದ ವೈದ್ಯರು ದಿನೇಶ್ ಮೃತಪಟ್ಟಿರುವುದಾಗಿ ತಿಳಿಸಿದರು.

ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor