ಎಐ ವಿಸ್ತರಣೆ: ಮಾಹೆ-ಗೂಗಲ್ ಇಂಡಿಯಾ ನಡುವೆ ಎಂಒಯು
ಉಡುಪಿ, ಅ.5: ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯನ್ನು ತನ್ನ ಸಂಸ್ಥೆಗಳಲ್ಲಿ ಅಳವಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ), ಗೂಗಲ್ ಇಂಡಿಯಾದೊಂದಿಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿವೆ.
ಈ ಒಪ್ಪಂದದಲ್ಲಿ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಎಐ ಕ್ಷೇತ್ರದಲ್ಲಿ ಗೂಗಲ್‌ನ ಪರಿಣತಿ, ಸುಧಾರಿತ ತಂತ್ರಜ್ಞಾನ ಹಾಗೂ ಎಐ ಸಾಮರ್ಥ್ಯಗಳನ್ನು ಬಳಸಿಕೊಂಡು ಪ್ರಮುಖ ಕ್ಷೇತ್ರ ಗಳಲ್ಲಿ ಎಐಯ ಅನ್ವಯಗಳನ್ನು ಅಭಿವೃದ್ಧಿ ಪಡಿಸಿ ಅನುಷ್ಠಾನ ಗೊಳಿಸುವ ಹೊಣೆಯನ್ನು ಮಾಹೆ ವಹಿಸಲಿದೆ ಎಂದು ಮಾಹೆ ಬಿಡುಗಡೆಗಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಈ ಸಹಭಾಗಿತ್ವವು ಮಾಹೆಯ ಮ್ಯಾಜಿಕ್ (ಮಾಹೆ ಏಜೆಂಟಿಕ್ ಇಂಟಲಿಜೆನ್ಸ್ ಕನ್ಸೋಲ್) ಉಪಕ್ರಮದ ಭಾಗವಾ ಗಿದ್ದು, ಇದರ ಮೂಲಕ ವಿಶ್ವವಿದ್ಯಾಲಯವು ಪೂರ್ಣಪ್ರಮಾಣದ ಎಐ-ಏಜೆಂಟಿಕ್ ವಿಶ್ವವಿದ್ಯಾಲಯ ವಾಗಿ ರೂಪುಗೊಳ್ಳುವ ಉದ್ದೇಶವನ್ನು ಹೊಂದಿದೆ. ಈ ಉಪಕ್ರಮದಡಿ, ಮಾಹೆಯು ಎಐ ಆಧಾರಿತ ನಾವೀನ್ಯ, ಸಂಶೋಧನೆ, ಶಿಕ್ಷಣ ಹಾಗೂ ಸಂಸ್ಥೆಯ ವಿವಿಧ ಅನ್ವಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎಐ ಸೆಂಟರ್ ಆಫ್ ಎಕ್ಸಲೆನ್ಸ್: ಈ ಸಹಯೋಗದ ಭಾಗವಾಗಿ, ಗೂಗಲ್ ತಂತ್ರಜ್ಞಾನ ಆಧಾರಿತ ಎಐ ಸೆಂಟರ್ ಆಫ್ ಎಕ್ಸಲೆನ್ಸ್‌ನ್ನು ಆರಂಭಿಸುವ ನಿಟ್ಟಿನಲ್ಲಿ ಮಾಹೆ ಕಾರ್ಯಪ್ರವೃತ್ತವಾಗಲಿದೆ. ಜೊತೆಗೆ, ಜೆಮಿನಿಸೇರಿದಂತೆ ಗೂಗಲ್‌ನ ವಿವಿಧ ಸಾಧನಗಳನ್ನು ಬಳಸಿಕೊಂಡು ಎಐ ಆಧಾರಿತ ಆರೋಗ್ಯ ಸಂಶೋಧನೆಯ ಸಾಧ್ಯತೆಗಳನ್ನು ಅನ್ವೇಷಿಸುವುದಕ್ಕೆ ಹಾಗೂ ಎಐ ಆಧಾರಿತ ಬೋಧನೆ ಮತ್ತು ಕಲಿಕೆಯನ್ನು ಬಲಪಡಿಸಲು ಶೈಕ್ಷಣಿಕ ಪರಿಕ್ರಮಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಪ್ರಾಶಸ್ತ್ಯ ನೀಡಲಿದೆ.
ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಎಐಯ ಅನ್ವಯ ಸಾಧ್ಯತೆಗಳನ್ನು ವಿಸ್ತರಿಸಲು, ಶಿಕ್ಷಣದ ಹೊಸ ಸಾಧ್ಯತೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ಸಹ ಸಹಭಾಗಿತ್ವ ಮುಕ್ತ ಅವಕಾಶವನ್ನು ಒದಗಿಸಲಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಮಾಹೆ- ಗೂಗಲ್ ಇಂಡಿಯ ಸಹಭಾಗಿತ್ವದ ಕುರಿತು ಮಾತನಾಡಿದ ಮಾಹೆಯ ಕುಲಪತಿ ಡಾ. ಕೆ. ಶರತ್ ರಾವ್, ಕೃತಕ ಬುದ್ಧಿಮತ್ತೆಯು ವಿಶ್ವವಿದ್ಯಾಲಯ ಶಿಕ್ಷಣ, ಸಂಶೋಧನೆ ಮತ್ತು ಆರೋಗ್ಯ ಸೇವೆಯನ್ನು ನೋಡುವ ರೀತಿ ಯನ್ನೇ ಬದಲಾಯಿಸುತ್ತಿದೆ. ಮಾಹೆಯು ‘ಮ್ಯಾಜಿಕ್’ ಮೂಲಕ, ಶೈಕ್ಷಣಿಕ ಹಾಗೂ ಸಾಂಸ್ಥಿಕ ಪ್ರಕ್ರಿಯೆಗಳಲ್ಲಿ ಏಜೆಂಟಿಕ್ ಎಐಯನ್ನು ಸಂಯೋಜಿಸುವ ಅವಕಾಶವನ್ನುಹೊಂದುತ್ತಿದೆ. ಈ ಪ್ರಯತ್ನಕ್ಕೆ ಜಾಗತಿಕ ಪರಿಣತಿ ಮತ್ತು ಅತ್ಯಾಧುನಿಕ ಎಐಸಾಮರ್ಥ್ಯಗಳನ್ನು ಒದಗಿಸುವಲ್ಲಿ ಗೂಗಲ್ ಇಂಡಿಯಾದೊಂದಿಗಿನ ಮಾಹೆಯ ಸಹಭಾಗಿತ್ವ ಪೂರಕವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾಹೆಯ ಕುಲಸಚಿವ ಡಾ.ಗಿರಿಧರ ಕಿಣಿ, ಆರೋಗ್ಯ ವಿಜ್ಞಾನ ವಿಭಾಗದ ಸಹ-ಕುಲಪತಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, ಮಾಹೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಡಾ. ಆನಂದ್ ವೇಣುಗೋಪಾಲ್, ಮಾಹೆಯ ಐಟಿಮತ್ತು ಡಿಜಿಟಲ್ ಟ್ರಾನ್ಸ್‌ಫಾರ್ಮೇಶನ್ ವಿಭಾಗದ ನಿರ್ದೇಶಕ ಡಾ. ಗಣೇಶ್ ಪ್ರಸಾದ್, ಹಾಗೂ ಡಾ.ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಗೂಗಲ್ ಇಂಡಿಯಾದ ಪರವಾಗಿ ಭಾರತ ಮತ್ತು ಎಸ್‌ಎಎಆರ್‌ಸಿ (ಸಾರ್ಕ್) ಗೂಗಲ್ ಎಜುಕೇಶನ್ ಮತ್ತು ಎಡ್‌ಟೆಕ್ ಲೀಡರ್ ವೈಭವ್ ಕುಮಾರ ಶ್ರೀವಾಸ್ತವ, ಗೂಗಲ್ ಇಂಡಿಯಾದ ಅಲಯನ್ಸ್ ಎಜುಕೇಶನ್ ವಿಭಾಗದ ಮುಖ್ಯಸ್ಥ ಅಮ್ರೀಶ್ ಕೊಹ್ಲಿ, ಗೂಗಲ್ ಇಂಡಿಯಾದ ದಕ್ಷಿಣ ಮತ್ತು ಪಶ್ಚಿಮ ವಲಯದ ಪ್ರಾದೇಶಿಕ ಮುಖ್ಯಸ್ಥೆ ನವಿಷಾ ಪ್ರಭಾಕರ್ ಪ್ರತೀಕ್ಷಾ ಆನಂದ್ ಉಪಸ್ಥಿತರಿದ್ದರು.