ಡಿವೈಎಫ್ಐಯಿಂದ ಹೊಸ್ತು ಹಬ್ಬದ ಸಂಭ್ರಮಾಚರಣೆ
ಕುಂದಾಪುರ, ಅ.12: ಹೊಸ್ತು ತೆನೆ ಹಬ್ಬದ ಪ್ರಯುಕ್ತ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ವಡೇರಹೋಬಳಿ ಘಟಕದ ಆಶ್ರಯದಲ್ಲಿ ಸ್ಥಳೀಯರಿಗಾಗಿ ವಿವಿಧ ಮನರಂಜನಾ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಹೊಸ್ತು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಗೋಲ್ಡನ್ ಮಿಲ್ಲರ್ ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಉದಯ ಕುಮಾರ್ ಮಾತನಾಡಿ, ಕಳೆದ 15 ವರ್ಷಗಳಿಂದ ಸ್ಥಳೀಯ ಮಹಿಳೆಯರು ಮತ್ತು ಯುವಜನರಿಗಾಗಿ ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸುವ ಮೂಲಕ ಹೊಸ್ತು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಡಿವೈಎಫ್‌ಐನ ಮಾಜಿ ಮುಖಂಡರಾದ ಸುರೇಶ್ ಕಲ್ಲಾಗರ, ಸ್ಥಳೀಯರಾದ ಅನ್ನಿ ಡಯಾಸ್ ಹಾಗೂ ಸೋನಿಯಾ ರಾಘವೇಂದ್ರ ಮಾತನಾಡಿದರು. ಅಧ್ಯಕ್ಷತೆಯನ್ನು ವಿಶ್ವನಾಥ ದಾರಿಮನೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ ಬಿಟಿಆರ್, ಗಣೇಶ್ ಕಲ್ಲಾಗರ, ಸಂಪತ್, ಯೋಗೀಶ್ ಹಾಗೂ ಚಂದ್ರಶೇಖರ ವಿ. ಉಪಸ್ಥಿತರಿದ್ದರು. ಡಿವೈಎಫ್‌ಐ ಘಟಕದ ಕಾರ್ಯದರ್ಶಿ ಗಣೇಶ್ ಬಿಟಿಆರ್ ಕಾರ್ಯಕ್ರಮ ನಿರೂಪಿಸಿದರು.