ಕುಂದಾಪುರ: ಕುಂದಾಪುರ ವಾಲಿಬಾಲ್‌ ಅಸೋಸಿಯೇಶನ್‌ ಮತ್ತು ಕುಂದಾಪುರ ಫ್ರೆಂಡ್ಸ್‌ ವಾಲಿಬಾಲ್‌ ಕ್ಲಬ್‌ ಇವರ ಸಹಯೋಗದಲ್ಲಿ ಅ 25, 26, 27ರ ಸಂಜೆ 6 ಗಂಟೆಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ಕೆಎಫ್‌ಕೆ ಟ್ರೋಫಿ 2026 ಹೆಸರಿನಲ್ಲಿ ಅಖಿಲ ಭಾರತ ಮಟ್ಟದ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಹೇಳಿದರು.

ಅವರು ಸೋಮವಾರ ನಗರದ ಹೊಸ ಬಸ್‌ ನಿಲ್ದಾಣ ಹತ್ತಿರದ ಕೋರ್ಟ್ ರೆಸ್ಟೋರೆಂಟ್ ಬಳಿಯ ಸಾಯಿ ಕಂಫರ್ಟ್‌ನಲ್ಲಿರುವ ವಾಲಿಬಾಲ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸುಮಾರು 2000ನೇ ಇಸವಿಯಲ್ಲಿ ತಾಲೂಕಿನ ಓರ್ವ ವಾಲಿಬಾಲ್‌ ಕ್ರೀಡಾಳು ಅಪಘಾತಕ್ಕೀಡಾದ ಸಂದರ್ಭದಲ್ಲಿ ಅವರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಸ್ಥಾಪಿಸಲಾಯಿತು. ಆಟಗಾರರಿಗೆ ನೆರವಾಗುವುದರ ಜತೆಗೆ ವಾಲಿಬಾಲ್ ಕ್ರೀಡೆಯ ಅಭಿವೃದ್ಧಿ ಮತ್ತು ಯುವ ಆಟಗಾರರಿಗೆ ಪ್ರೋತ್ಸಾಹ ನೀಡುವ ಕಾರ್ಯದಲ್ಲಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಕುಂದಾಪುರದ ಪ್ರಸಿದ್ದ ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ 40 ವರುಷಗಳನ್ನು ಪೂರ್ಣಗೊಳಿಸಿದೆ. ಕಳೆದ 4 ದಶಕಗಳಿಂದ ವಾಲಿಬಾಲ್ ಕ್ರೀಡೆಗೆ ನಿರಂತರ ಪ್ರೋತ್ಸಾಹ ನೀಡಿ ಅನೇಕ ಪ್ರತಿಭೆಗಳನ್ನು ಬೆಳೆಸಿ ಜಿಲ್ಲಾ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರನ್ನು ರೂಪಿಸಿದ ಹಿರಿಮೆ ಈ ಸಂಸ್ಥೆಯದ್ದು ಎಂದು ಹೇಳಿದರು.

ಈ ಎರಡು ಸಂಸ್ಥೆಗಳ ಮಹತ್ವದ ಮೈಲುಗಲ್ಲುಗಳನ್ನು ಸ್ಮರಣಿಯಗೊಳಿಸುವ ಉದ್ದೇಶದಿಂದ ಕುಂದಾಪುರದಲ್ಲಿ ಬೃಹತ್ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಿ, ಕ್ರೀಡಾ ಪ್ರೇಮಿಗಳಿಗೆ ವಾಲಿಬಾಲ್ ಕ್ರೀಡೆಯ ರಸದೌತಣವನ್ನು ಉಣಬಡಿಸಬೇಕೆಂಬ ಆಶಯದಿಂದ ಪಂದ್ಯಾಟ ಆಯೋಜಿಸಲಾಗಿದೆ ಎಂದರು.

ರಾಷ್ಟ್ರದ ಬಲಿಷ್ಟ ಆರು ಪುರುಷ ತಂಡಗಳು ಆಹ್ವಾನಿಸಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳ ರಾಷ್ಟ್ರಮಟ್ಟದ ಆಟಗಾರರು ಭಾಗವಹಿಸಲಿದ್ದು, ಅನುಭವಿ ತೀರ್ಪುಗಾರರ ಉಪಸ್ಥಿತರಿರಲಿದ್ದಾರೆ. ಆರು ತಂಡಗಳನ್ನು ಎರಡು ವಿಭಾಗವಾಗಿ ವಿಂಗಡಿಸಿ, ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ ಎಂದು ತಿಳಿಸಿದರು.

ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿಯೊಂದಿಗೆ ಪ್ರಥಮ 4.ಲಕ್ಷ ರೂ., ದ್ವಿತೀಯ 3ಲಕ್ಷ, ತೃತೀಯ 2 ಲಕ್ಷ, ಮತ್ತು ಚತುರ್ಥ 1 ಲಕ್ಷ ನಗದು ಬಹುಮಾನ ದೊರೆಯಲಿದೆ. ವೈಯಕ್ತಿಕ ವಿಭಾಗದ ಆರು ಶ್ರೇಷ್ಠ ಪ್ರದರ್ಶನಕ್ಕೆ ಟ್ರೋಫಿ ಹಾಗೂ ನಗದು ಬಹುಮಾನವಿರಲಿದೆ. ಅ. 25ರ ಸಂಜೆ 6 ಗಂಟೆಗೆ ಪಂದ್ಯಾಟದ ಉದ್ಘಾಟನೆ ನಡೆಯಲಿದೆ. ಅ 27ರ ಸಂಜೆ ಸಮಾರೋಪ ಸಮಾರಂಭ ಜರಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುಂದಾಪುರ ವಾಲಿಬಾಲ್‌ ಅಸೋಸಿಯೇಶನ್‌ ಗೌರವಾಧ್ಯಕ್ಷ ರಾಜೇಶ್‌ ಕಾರಂತ್‌, ಕುಂದಾಪುರ ಫ್ರೆಂಡ್ಸ್‌ ವಾಲಿಬಾಲ್‌ ಕ್ಲಬ್‌ ಗೌರವಾಧ್ಯಕ್ಷ ರಾಜೇಶ್‌ ಕಾವೇರಿ, ಅಧ್ಯಕ್ಷ ರಮಾನಂದ ಕೆ ಉಪಸ್ಥಿತರಿದ್ದರು.

15 ರಿಂದ 20 ಸಾವಿರ ಪ್ರೇಕ್ಷಕರಿಗೆ ಗ್ಯಾಲರಿ

ಪಂದ್ಯಾಟದ ವೀಕ್ಷಣಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಪ್ರೇಮಿಗಳು ಆಗಮಿಸುವ ಹಿನ್ನಲೆ ಸುಮಾರು 15 ರಿಂದ 20 ಸಾವಿರ ಪ್ರೇಕ್ಷಕರಿಗೆ ಅನುಕೂಲವಾಗುವಂತೆ ವಿಶೇಷ ಗ್ಯಾಲರಿ ಮತ್ತು ಅಗತ್ಯ ಮೂಲ ಸೌಕರ್ಯದ ವ್ಯವಸ್ಥೆ ಮಾಡಲಾಗುತ್ತಿದ್ದು, ಭೂಮಿ ಪೂಜೆ ನೆರವೇರಿಸಲಾಗಿದೆ. ಗಣ್ಯರು, ಜನಪ್ರತಿನಿಧಿಗಳು ಮತ್ತು ವಿಶೇಷ ಆಹ್ವಾನಿತರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕೃಷ್ಣಪ್ರಸಾದ್‌ ಅಡ್ಯಂತಾಯ ತಿಳಿಸಿದರು.

ಭೂಮಿ ಪೂಜೆ

ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾವಳಿಯ ವೀಕ್ಷಣೆಗೆ ಸುಮಾರು 15ರಿಂದ 20 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಗ್ಯಾಲರಿ ಹಾಗೂ ಕ್ರೀಡಾಂಗಣ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ವಾಲಿಬಾಲ್‌ ಅಸೋಸಿಯೇಶನ್‌ ಅಧ್ಯಕ್ಷ ಕೃಷ್ಣಪ್ರಸಾದ್‌ ಅಡ್ಯಂತಾಯ, ಕುಂದಾಪುರ ಫ್ರೆಂಡ್ಸ್‌ ವಾಲಿಬಾಲ್‌ ಕ್ಲಬ್‌ ಗೌರಾವಾಧ್ಯಕ್ಷ ರಾಜೇಶ್ ಕಾವೇರಿ, ಅಧ್ಯಕ್ಷ ರಮಾನಂದ ಕೆ., ಖಜಾಂಚಿ ಸುಧೀರ್‌ ಕೆ. ಎಸ್‌., ಕುಂದಾಪುರ ಬಿಜೆಪಿ ಅಧ್ಯಕ್ಷ ಸುರೇಶ ಶೆಟ್ಟಿ, ನಕ್ಷತ್ರ ಜುವೆಲರ್ಸ್‌ ಮಾಲೀಕ ನವೀನ್‌ ಹೆಗ್ಡೆ, ಪ್ರಮುಖರಾದ ಕುಸುಮಾಕರ ಶೆಟ್ಟಿ, ಅರುಣ ಬಾಣ, ಭಾಸ್ಕರ್‌ ವಿಠ್ಠಲವಾಡಿ, ಪ್ರಕಾಶ ಖಾರ್ವಿ, ಹುಸೇನ್‌ ಹೈಕಾಡಿ, ಆನಂದ ಬಿಲ್ಲವ, ವಾಲಿಬಾಲ್‌ ತೀರ್ಪುಗಾರ ಜಾಯ್‌ ಜೆ ಕರ್ವೆಲೋ, ವಾಲಿಬಾಲ್‌ ಆಟಗಾರ ಅಶೋಕ್‌ ಪಡಿಯಾರ್‌, ಮಹಮ್ಮದ್‌ ಸಮೀರ್‌, ಶ್ರೀಧರ್‌ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor