ಒಳಚರಂಡಿ ಅವ್ಯವಸ್ಥೆಯಿಂದ ರಸ್ತೆ ಮೇಲೆ ಕೊಳಚೆ ನೀರು; ಸಮಸ್ಯೆ ಸರಿಪಡಿಸಿದ ಪುರಸಭೆ
ಕುಂದಾಪುರ, ಅ.14: ಕುಂದಾಪುರ ಪುರಸಭಾ ವ್ಯಾಪ್ತಿಯ ಫೆರ್ರಿ ವಾರ್ಡ್ನ ವೆಸ್ಟ್ ಬ್ಲಾಕ್ ರಸ್ತೆಯಲ್ಲಿ ಒಳಚರಂಡಿ (ಯುಜಿಡಿ) ಅವಾಂತರದಿಂದಾಗಿ ಕಳೆದ ಎಂಟು ದಿನಗಳಿಂದ ರಸ್ತೆ ಹಾಗೂ ಮಳೆನೀರು ಹರಿಯುವ ಚರಂಡಿ ಯಲ್ಲಿಯೇ ಕೊಳಚೆ ನೀರು ಹರಿಯುತ್ತಿದ್ದು, ಸ್ಥಳೀಯ ನಿವಾಸಿಗರು ತೊಂದರೆ ಅನುಭವಿಸುವಂತಾಗಿತ್ತು. ದುರ್ವಾಸನೆ, ಸೊಳ್ಳೆ ಕಾಟದಿಂದ ಇಲ್ಲಿನ ಜನ ಹೈರಾಣಾಗಿದ್ದರು.
ಈಗ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಬುಧವಾರ ಪುರಸಭೆಯಿಂದ ಮಳೆ ನೀರು ಹರಿಯುವ ಪೈಪ್ಲೈನ್ ದುರಸ್ತಿ ಗೊಳಿಸುವ ಮೂಲಕ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಿದ್ದಾರೆ. ಸದ್ಯಕ್ಕೆ ಕೊಳಚೆ ನೀರು ರಸ್ತೆ ಹಾಗೂ ಚರಂಡಿ ಯಲ್ಲಿ ಹರಿಯುವುದಕ್ಕೆ ತಡೆ ಬಿದ್ದಿದ್ದು, ಇಲ್ಲಿನ ಜನ ಕೊಂಚ ನಿರಾಳ ಆಗುವಂತಾಗಿದೆ.
ಇಲ್ಲಿನ ಫೆರ್ರಿ ವಾರ್ಡ್ನ ವೆಸ್ಟ್ ಬ್ಲಾಕ್ ರಸ್ತೆಯಲ್ಲಿ ಕಳೆದ ಕೆಲ ದಿನಗಳಿಂದ ತ್ಯಾಜ್ಯ ನೀರಿನ ಸಮಸ್ಯೆ ಕಾಡುತ್ತಿತ್ತು. ಈ ಪರಿಸರದಲ್ಲಿ ನ್ಯಾಯಾಧೀಶರ ಮನೆ, ಪೊಲೀಸ್ ವಸತಿಗೃಹ, ಶಿಕ್ಷಣ, ಅರಣ್ಯ ಇಲಾಖೆ ಕಚೇರಿ, ಮಸೀದಿ ಸಹಿತ ನೂರಾರು ಮನೆಗಳು ಇವೆ. ಹೋಟೆಲ್ ಸಹಿತ ವಿವಿಧೆಡೆಯಿಂದ ಬಿಡುವ ಕೊಳಚೆ ನೀರು ಒಳಚರಂಡಿಯಲ್ಲಿ ಹರಿಯದೇ ಸಾಮಾನ್ಯ ಚರಂಡಿ ಹಾಗೂ ಪಿಟ್ನಿಂದ ಮೇಲಕ್ಕೆ ಬಂದು ರಸ್ತೆಯಲ್ಲಿಯೇ ಹರಿದು ಬುಧವಾರ ಮಧ್ಯಾಹ್ನದವರೆಗೂ ಇಡೀ ಪರಿಸರ ಗಬ್ಬು ನಾರುತ್ತಿತ್ತು. ಪರಿಸರದಲ್ಲಿ ಸೊಳ್ಳೆ ಕಾಟವೂ ಹೆಚ್ಚಾಗಿತ್ತು.
ಇದರಿಂದ ತೊಂದರೆಗೊಳಗಾದ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಪರಿಸರ ಇಂಜಿನಿಯರ್ ಗುರುಪ್ರಸಾದ್ ಶೆಟ್ಟಿ ಹಾಗೂ ಆರೋಗ್ಯ ನಿರೀಕ್ಷಕ ರಾಘವೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪೌರ ಕಾರ್ಮಿಕರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಫೆರ್ರಿ ರಸ್ತೆಯಲ್ಲಿರುವ ಮಳೆ ನೀರು ಹರಿದು ಹೋಗಲು ಅಳವಡಿಸಿದ್ದ ಪೈಪ್ಲೈನ್ ಸರಿಪಡಿಸಿದ ಬಳಿಕ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುವುದು ನಿಂತಿದೆ. ಬಳಿಕ ಬ್ಲೀಚಿಂಗ್ ಪೌಡರ್ ಹಾಕಿ, ಈ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.
ಮಂಗಳವಾರವಷ್ಟೇ ಪೌರಾಡಳಿತ ಸಚಿವರು ಇಲ್ಲಿನ ಯುಜಿಡಿ ಅರೆಬರೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಗರದ ಒಳಚರಂಡಿ ಅವ್ಯವಸ್ಥೆಯಿಂದ ಬಹಳಷ್ಟು ಸಮಸ್ಯೆಗಳಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯ ನಾಗರಿಕರು ಮತ್ತೊಮ್ಮೆ ಒತ್ತಾಯಿಸಿದ್ದಾರೆ.