"ಗೃಹಜ್ಯೋತಿ ಯೋಜನೆಯ ದಾಖಲೆ ಮರುಪರಿಶೀಲನೆ ಅ.31ಕ್ಕೆ ವಿಸ್ತರಣೆ"
ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ
ಉಡುಪಿ, ಅ.14: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನಾ ಪ್ರಕ್ರಿಯೆ ಅವಧಿಯನ್ನು ಅ. 31 ರವರೆಗೆ ವಿಸ್ತರಿಸಲಾಗಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.
ಬುಧವಾರ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಉಡುಪಿ ತಾಲೂಕು ಪಂಚಾಯತ್ನ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಗೃಹಜ್ಯೋತಿ ಯೋಜನೆ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನೆ ಸಮಯದಲ್ಲಿ ಫಲಾನುಭವಿಗಳ ಮನೆ ಗಳಿಗೆ ಬೀಗ ಹಾಕಿರುವುದು, ಪರಿಶೀಲನಾ ಸಮಯದಲ್ಲಿ ಫಲಾನುಭವಿಗಳು ಲಭ್ಯವಿಲ್ಲದೇ ಇರುವುದು ಸೇರಿದಂತೆ ನಾನಾ ಕಾರಣಗಳಿಂದ ಮರುಪರಿಶೀಲನಾ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೇ ಇರುವುದರಿಂದ, ಈ ಪ್ರಕ್ರಿಯೆಯನ್ನು ಅ. 31ರವರೆಗೆ ವಿಸ್ತರಿಸಲಾಗಿದೆ ಎಂದವರು ವಿವರಿಸಿದರು.
ಮೆಸ್ಕಾಂ ಸಿಬ್ಬಂದಿಗಳು ಮೂರು ಬಾರಿ ಮನೆ ಭೇಟಿ ನೀಡಿದಾಗಲು ಫಲಾನುಭವಿಗಳು ಲಭ್ಯವಿಲ್ಲದಿದ್ದಲ್ಲಿ, ಫಲಾನು ಭವಿಗಳು ಸಂಬಂಧಪಟ್ಟ ಮೆಸ್ಕಾಂ ಕಚೇರಿಗೆ ಖುದ್ದಾಗಿ ತೆರಳಿ ಮಾಹಿತಿಗಳನ್ನು ನೀಡಬಹುದಾಗಿದೆ ಎಂದು ರಮೇಶ್ ಕಾಂಚನ್ ತಿಳಿಸಿದರು.
ಗ್ಯಾರಂಟಿ ಬಗ್ಗೆ ಸುಳ್ಳು ಸುದ್ದಿ: ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆ, ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸ ಬೇಕು ಎಂಬುದೂ ಸೇರಿದಂತೆ ಹಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಸಾರ್ವಜನಿಕರು ಈ ಯಾವುದೇ ಸುಳ್ಳು ವದಂತಿಗಳಿಗೆ ಕಿಗೊಡ ಬಾರದು. ಗ್ಯಾರಂಟಿ ಯೋಜನೆಗಳು ಈ ಹಿಂದಿನಂತೆಯೇ ಮುಂದುವರೆಯಲಿದೆ ಎಂದ ಸ್ಪಷ್ಟ ಪಡಿಸಿದ ರಮೇಶ್ ಕಾಂಚನ್, ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಮೃತಪಟ್ಟ ಪ್ರಕರಣಗಳ ಪರಿಶೀಲನಾ ಕಾರ್ಯ ಮಾತ್ರ ನಡೆಯುತ್ತಿದ್ದು, ಇದಕ್ಕೆ ಕುಟುಂಬಸ್ಥರು ಅಗತ್ಯ ಸಹಕಾರ ನೀಡಬೇಕು ಎಂದರು.
ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಆಗುವ ಮಾಸಿಕ ಸಹಾಯಧನದ ಹಣವನ್ನು ಹಿಂದಿನ ಸಾಲದ ಕಂತು ಅಥವಾ ಬಡ್ಡಿಯ ನೆಪದಲ್ಲಿ ಬ್ಯಾಂಕುಗಳು ನೇರವಾಗಿ ಕಡಿತಗೊಳಿಸುವಂತಿಲ್ಲ ಎಂದು ಸರಕಾರ ಆದೇಶ ಹೊರಡಿಸಿದ್ದು, ಇದಕ್ಕೆ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಗೃಹಲಕ್ಷ್ಮೀ ಯೋಜನೆಯಡಿ ನೀಡಲಾಗುತ್ತಿರುವ 2000 ರೂ.ಗಳ ಆರ್ಥಿಕ ಸಹಾಯಧನ ಐದು- ಆರು ತಿಂಗಳಿನಿಂದ ಪಾವತಿಯಾಗುತ್ತಿಲ್ಲ ಎಂದು ಫಲಾನುಭವಿ ಮಹಿಳೆಯರಿಂದ ದೂರುಗಳು ಕೇಳಿ ಬರುತ್ತಿವೆ. ಹಣ ಜಮೆಯಾದ ಬಗ್ಗೆ ಬ್ಯಾಂಕುಗಳಿಂದ ಸಂದೇಶ ಬಾರದ ಹಿನ್ನೆಲೆಯಲ್ಲಿ ಈ ರೀತಿಯ ಗೊಂದಲಗಳು ಉಂಟಾಗುತ್ತಿವೆ. ಫಲಾನುಭವಿಗಳು ಆಗಿಂದಾಗ್ಗೆ ತಮ್ಮ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಪರಿಶೀಲಿಸಿ, ಹಣ ಪಾವತಿ ಆಗಿರುವುದನ್ನು ಖಚಿತಪಡಿಸಿ ಕೊಳ್ಳಬೇಕು ಎಂದು ರಮೇಶ್ ಕಾಂಚನ್ ತಿಳಿಸಿದರು.
ಅರ್ಹ ಫಲಾನುಭವಿಗಳ ಖಾತೆಗೆ ಯೋಜನೆಯ ಹಣ ಜಮೆಯಾಗುವ ಸಂದರ್ಭದಲ್ಲಿ ಮೊಬೈಲ್ಗಳಿಗೆ ಸಂದೇಶ ರವಾನಿಸುವ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಪಡಿತರ ಚೀಟಿದಾರರು ಇ-ಕೆವೈಸಿಯನ್ನು ತಪ್ಪದೇ ಮಾಡಿಸಬೇಕು. ಈಗಾಗಲೇ ಉಡುಪಿ ತಾಲೂಕಿ ನಲ್ಲಿ ಶೇ.81ರಷ್ಟು ಇ-ಕೆವೈಸಿ ಕಾರ್ಯ ಪೂರ್ಣಗೊಂಡಿದ್ದು, ಅಕ್ಟೋಬರ್ 20ರ ಒಳಗೆ ಬಾಕಿ ಉಳಿದಿರುವ ಇ-ಕೆವೈಸಿ ಕಾರ್ಯ ಪೂರ್ಣಗೊಳ್ಳಬೇಕು. ನಾಗರಿಕರು ಅನ್ನಸೇವೆ ಆಪ್ ಮೂಲಕವೂ ಸ್ವಯಂ ಆಗಿ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ ಎಂದು ಅವರು ನುಡಿದರು.
ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಣಾ ಕೇಂದ್ರಗಳಿಗೆ ಸಮಿತಿಯ ಸದಸ್ಯರು ಆಗಾಗ್ಗೆ ಭೇಟಿ ನೀಡಿ, ಅಲ್ಲಿ ಯಾವುದೇ ಕುಂದುಕೊರತೆಗಳು ಕಂಡುಬಂದಲ್ಲಿ ಸಭೆಯ ಗಮನಕ್ಕೆ ತರಬೇಕು ಎಂದರು.
ಶಕ್ತಿ ಯೋಜನೆಯಡಿ ಕೊರೋನಾ ನಂತರ ಸ್ಥಗಿತಗೊಂಡಿದ್ದ ಕೆಲವು ರೂಟ್ಗಳ ಬಸ್ಗಳು ಇಂದಿಗೂ ಸಂಚರಿ ಸುತ್ತಿಲ್ಲ. ಪ್ರತೀ ಸಭೆಗಳಲ್ಲಿಯೂ ಬಡಗುಬೆಟ್ಟುಗೆ ನಿಗಮದ ಬಸ್ನ ಸಂಚಾರ ಕಲ್ಪಿಸುವಂತೆ ಸಮಿತಿ ಸದಸ್ಯರು ಒತ್ತಾಯಿಸುತ್ತಿದ್ದರೂ ಸಹ ಇದು ಕಾರ್ಯರೂಪಕ್ಕೆ ಬಂದಿಲ್ಲ. ಆದಷ್ಟು ಶೀಘ್ರವಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪದವಿ ಪೂರೈಸಿದ ಯುವಜನರಿಗೆ ಉದ್ಯೋಗ ದೊರಕುವವರೆಗೆ ಆರ್ಥಿಕ ಸಹಾಯಧನ ನೀಡಲು ರೂಪಿಸಿರುವ ಯುವನಿಧಿ ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಏರ್ಪಡಿಸಬೇಕು. ಯೋಜನೆಯಡಿ ನೋಂದಣಿ ಕಾರ್ಯಕ್ರಮಗಳು ನಡೆಯುವ ಬಗ್ಗೆ ಯುವಜನರಲ್ಲಿ ಹೆಚ್ಚಿನ ಪ್ರಚಾರ ಮೂಡಿಸಬೇಕು ಎಂದ ಕಾಂಚನ್, ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಈ ಯೋಜನೆಯ ಬಗ್ಗೆ ಸಮಸ್ಯೆಗಳು ಬಂದಾಗ ಆದಷ್ಟು ತಮ್ಮ ಹಂತ ದಲ್ಲಿಯೇ ಬಗೆಹರಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಸಾರ್ವಜನಿಕರಲ್ಲಿ ಇವುಗಳ ಬಗ್ಗೆ ಅರಿವು ಮೂಡಿಸಿ, ಅರ್ಹ ಫಲಾನುಭವಿ ಗಳು ಯೋಜನೆಗಳಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನ ಸೇವಕರಿದ್ದಂತೆ. ಎಷ್ಟೇ ಒತ್ತಡದಲ್ಲಿದ್ದರೂ ಸಹ ಸಾರ್ವಜನಿಕರ ಅಹವಾಲುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ತಾಲೂಕು ಪಂಚಾಯತ್ನ ಸಹಾಯಕ ನಿರ್ದೇಶಕಿ ಫರ್ಜಾನಾ ಎಂ, ಸಮಿತಿ ಸದಸ್ಯರು, ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.