ಉಡುಪಿ, ಅ.14: ಭಾರತೀಯ ಸಂಸ್ಕೃತಿಯ ಉಳಿವಿನಲ್ಲಿ ಯುವಜನರ ಹಾಗೂ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದು. ಇಂದಿನ ಯುವಜನತೆ ನಾಳಿನ ಸಮಾಜದ ರೂವಾರಿಗಳು. ಆಧುನಿಕತೆ ಹಾಗೂ ತಂತ್ರಜ್ಞಾನದ ಭರಾಟೆಯಲ್ಲಿ ಪಾಶ್ಚಿಮಾತ್ಯ ಜೀವನಶೈಲಿಗೆ ಮಾರುಹೋಗದೆ, ನಮ್ಮ ಬದುಕಿನ ಮೌಲ್ಯಗಳಾದ ಹಿರಿಯರಿಗೆ ಗೌರವ ನೀಡುವುದು, ಸಹಿಷ್ಣುತೆ, ಕುಟುಂಬ ವ್ಯವಸ್ಥೆ ಹಾಗೂ ‘ವಸುಧೈವ ಕುಟುಂಬಕಂ’ ಎಂಬ ವಿಶಾಲ ಮನೋಭಾವ ವನ್ನು ಉಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಹೇಳಿದ್ದಾರೆ.

ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶಂಕರನಾರಾಯಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಶಂಕರನಾರಾಯಣ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಯುವ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶಿಕ್ಷಣ ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ದೇಶದ ಭವ್ಯ ಇತಿಹಾಸ, ನೃತ್ಯ, ಸಂಗೀತ, ಸಾಹಿತ್ಯ ಹಾಗೂ ಪರಂಪರೆಯನ್ನು ಪರಿಚಯಿಸುವ ಮಾಧ್ಯಮವಾಗಬೇಕು. ಯುವ ಸಮುದಾಯವು ವೈಜ್ಞಾನಿಕ ಮನೋಭಾವದ ಜೊತೆಗೆ ತಮ್ಮ ಸಾಂಸ್ಕೃತಿಕ ಬೇರುಗಳ ಬಗ್ಗೆ ಹೆಮ್ಮೆ ತಳೆದು, ಆಚರಣೆಗಳ ಹಿಂದಿನ ಅರ್ಥಪೂರ್ಣ ತತ್ವಗಳನ್ನು ಅರಿತಾಗ ಮಾತ್ರ ಭಾರತೀಯ ಸಂಸ್ಕೃತಿ ಜೀವಂತವಾಗಿ ಹಾಗೂ ನಿರಂತರವಾಗಿ ಮುಂದಿನ ಪೀಳಿಗೆಗೆ ಹರಿದುಬರಲು ಸಾಧ್ಯ. ನಮ್ಮ ಸಂಸ್ಕೃತಿ ನಮ್ಮ ಗೌರವದ ಪ್ರತೀಕ ಎಂದವರು ಹೇಳಿದರು.

ಶಂಕರನಾರಾಯಣ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೋಮಪ್ಪ ಪೂಜಾರಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ದಿವ್ಯಾ ಎಂ, ಕಾಲೇಜಿನ ಅಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಡಾ.ನಳಿನಾಶ್ರೀ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಗಂಗಾಧರ ಆರ್ ಎಚ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಶ್ಯಾಮ್ ಜಿ.ಎಸ್ ಪೂಜಾರಿ ಗಂಗೊಳ್ಳಿ ಇವರಿಂದ ಕೊಳಲು ವಾದನ, ಅನಿಲ್ ಬಿರ್ತಿ ಮತ್ತು ತಂಡದಿಂದ ವೀರಗಾಸೆ, ಪ್ರಶಾಂತ್ ಬಿರ್ತಿ ಮತ್ತು ತಂಡದಿಂದ ಕಂಸಾಳೆ, ಚೈತನ್ಯ ಮತ್ತವರ ತಂಡದಿಂದ ಜಾನಪದ ಸಂಗೀತ, ಸಾವಿತ್ರಿ ನೃತ್ಯ ಶಾಲಾ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಮತ್ತು ಶಾಸ್ತ್ರೀಯ ನೃತ್ಯ, ಕಾಲೇಜಿನ ಯಕ್ಷಗಾನ ತಂಡದಿಂದ ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor