ಫೈಲ್‌ ಫೋಟೊ 

ಪಡುಬಿದ್ರಿ : ಉಚ್ಚಿಲದ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ ಮಹೋ ತ್ಸವ-2026ರಲ್ಲಿ ಇದೇ ಮೊದಲ ಬಾರಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಗಳನ್ನು ಅಯೋಜಿಸಿದ್ದು, ಇದು ನೆರೆದ ಕ್ರೀಡಾಪ್ರೇಮಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ನೆರೆದ ಪ್ರೇಕ್ಷಕರ ಕರತಾಡನ, ಹುರಿದುಂಬಿಸುವ ಘೋಷಣೆಗಳ ನಡುವೆ ತಮ್ಮ ನೆಚ್ಚಿನ ಕುಸ್ತಿ ಪಟುಗಳ ಗೆಲುವಿಗಾಗಿ ಅಭಿಮಾನಿಗಳು ಹರ್ಷೋದ್ಗಾರ ಮಾಡುತ್ತಿದ್ದ ದೃಶ್ಯ ಸ್ಪರ್ಧೆಯ ವೇಳೆ ಕಂಡುಬಂತು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ಒಟ್ಟು 232 ಕುಸ್ತಿಪಟುಗಳು ಭಾಗವಹಿಸಿದ್ದರು. ಉಚ್ಚಿಲ ದಸರಾ ಕುವರಿ 2026-27 ಆಗಿ ಶೌರ್ಯಾ (ಶಿವಾಜಿ ಫಿಜಿಕಲ್ ಬೋಳಾರ್), ಉಚ್ಚಿಲ ದಸರಾ ಕುಮಾರ ಆಗಿ ಪ್ರಕಾಶ್ (ಎಂ.ಆರ್. ಕೋಡಿಕಲ್), ಉಚ್ಚಿಲ ದಸರಾ ಕೇಸರಿಯಾಗಿ ಮನೋಜ್ ಎಸ್.ಎಮ್( ಶಿವಾಜಿ ಫಿಜಿಕಲ್ ಬೋಳಾರ್), ಉಚ್ಚಿಲ ದಸರಾ ಉದಯೋ ನ್ಮುಖ ಕುಸ್ತಿ ಪಟು ಆಗಿ ಮಹಿಳೆಯರ ವಿಭಾಗದಲ್ಲಿ ಕ್ಷಮಾ (ಜೈ ಆಂಜನೇಯ ಅಡ್ಯಾರು ಪದವು) ಹಾಗೂ ಪುರುಷರ ವಿಭಾಗದಲ್ಲಿ ಝೈಮ್ (ಎಸ್‌ಎಂಎಸ್ ಬ್ರಹ್ಮಾವರ) ಪ್ರಶಸ್ತಿ ಪಡೆದರು.

ಸ್ಪರ್ಧಾಕೂಟದ ಸಮಗ್ರ ತಂಡ ಪ್ರಶಸ್ತಿಯನ್ನು ಶಿವಾಜಿ ಫಿಜಿಕಲ್ ಬೋಳಾರ್ ತಂಡ ಪಡೆದುಕೊಂಡಿತು. ಕುಸ್ತಿ ಪಂದ್ಯಾಕೂಟಕ್ಕೆ ಉಚ್ಚಿಲ ದಸರಾ ರೂವಾರಿ ಜಿ.ಶಂಕರ್ ಚಾಲನೆ ನೀಡಿದರು.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ನಾಲ್ಕುಪಟ್ನ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಸತೀಶ್ ಅಮೀನ್ ಪಡುಕರೆ, ಪಂದ್ಯಾಕೂಟದ ಸಂಚಾಲಕ ವಿಜಯ ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor