ಉಡುಪಿ, ಅ.14: ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃತಿ ರಚಿಸಿರುವ ಡಾ.ಶಿವರಾಮ ಕಾರಂತರ ಪ್ರವಾಸ ಕಥನಗಳು ಅವರ ವಿಶಿಷ್ಟ ಅಭಿವ್ಯಕ್ತಿ. ಅವರ ಪ್ರವಾಸ ಕಥನಗಳು ನಾಡಿನ ವಾಸ್ತವ ಅನುಭವವನ್ನು ನಾವು ಅನುಭವಿಸುವಂತೆ ಚಿತ್ರಿಸುತ್ತಾರೆ. ಓದುಗರ ಸಾಂಸ್ಕೃತಿಕ ಮತ್ತು ಕಲಾತ್ಮಕ ಜ್ಞಾನವನ್ನು ಅವು ಹೆಚ್ಚಿಸುತ್ತವೆ ಎಂದು ಉಪನ್ಯಾಸಕ ಹಾಗೂ ಪತ್ರಕರ್ತ ಡಾ.ಗಣೇಶ್ ಪ್ರಸಾದ್ ನಾಯಕ್ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನಗರದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಡಾ.ಶಿವರಾಮ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ನಡೆದ ಅರಿವಿನ ಬೆಳಕು ಉಪನ್ಯಾಸ ಮಾಲೆ-18ನೇ ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತರ ಪ್ರವಾಸ ಕಥನಗಳ ಸ್ವಾರಸ್ಯಗಳು ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಕಾಂತ ಭಟ್, ಕಾರಂತರ ಕೃತಿಗಳು ವಿದ್ಯಾರ್ಥಿಗಳ ಬೌದ್ದಿಕ ವಿಕಾಸಕ್ಕೆ ಸಹಕಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಕಾರಂತರ ಕೃತಿಗಳು ಯುವಜನರಲ್ಲಿ ಬಹುಶಿಸ್ತೀಯ ಅಧ್ಯಯನ ನಡೆಸಲು ಪ್ರೇರೇಪಿಸುತ್ತದೆ ಎಂದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರಜ್ಞಾ ಮಾರ್ಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ವಿದ್ಯಾರ್ಥಿಗಳಾದ ದೇವರಾಜ ಪುತ್ರನ್ ನಿರೂಪಿಸಿ, ಗಣೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor