ಉಡುಪಿ, ಅ.23:ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಬೆಳವಣಿಗೆಗೆ ಶ್ರಮಿಸಿದ ದಾರ್ಶನಿಕರ ಆದರ್ಶಗಳನ್ನು ಹಾಗೂ ದೇಶಕ್ಕೆ ಸ್ವಾತಂತ್ರ್ಯ ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಹೋರಾಟಗಾರರ ಜೀವನತತ್ವಗಳನ್ನು ಜನಸಾಮಾನ್ಯರು ಅರ್ಥೈಸಿಕೊಂಡು ಪಾಲಿಸಿದಾಗ ಅವರ ಜಯಂತಿ ಕಾರ್ಯಕ್ರಮಗಳು ಸಾರ್ಥಕತೆ ಪಡೆಯುತ್ತವೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಅಭಿಪ್ರಾಯಪಟ್ಟಿದ್ದಾರೆ.

ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಗದ್ಗುರು ಶ್ರೀಮಧ್ವಾಚಾರ್ಯರ ಜಯಂತಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಧ್ವಾಚಾರ್ಯರು ಹಾಗೂ ರಾಣಿ ಚೆನ್ನಮ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಸಮಾಜದ ಸುಧಾರಣೆಗೆ, ಸಮ ಸಮಾಜ ನಿರ್ಮಾಣಕ್ಕೆ ಹಾಗೂ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹನೀಯರು, ದಾರ್ಶನಿಕರು, ವೀರ ಮಹಿಳೆಯರು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.

ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಮಧ್ವಾಚಾರ್ಯರ ತತ್ವಗಳು ಅನುಕರಣೀಯ. ಜಲಸಂಪನ್ಮೂಲದ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಅವರು ಬದುಕು ಕಟ್ಟಿಕೊಡುವ ಕೆಲಸವನ್ನು ಆಗಿನ ಕಾಲದಲ್ಲಿಯೇ ಮಾಡಿದ್ದರು ಎಂದರು.

ಕಿತ್ತೂರು ರಾಣಿ ಚೆನ್ನಮ್ಮನ ವೀರಗುಣಗಳನ್ನು ಪ್ರಸ್ತುತ ಸ್ತ್ರೀಯರು ಅಳವಡಿಸಿ ಕೊಳ್ಳಬೇಕು. ವಿಸ್ತೀರ್ಣದಲ್ಲಿ ಪುಟ್ಟ ರಾಜ್ಯವಾಗಿದ್ದ ಕಿತ್ತೂರಿನ ಮೇಲೆ ಬ್ರಿಟಿಷರು ಆಕ್ರಮಣ ಮಾಡಿದಾಗ ಎದೆಗುಂದದೆ ಹೋರಾಡಿದ ಕೀರ್ತಿ ರಾಣಿ ಚೆನ್ನಮ್ಮರದ್ದು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಚೆನ್ನಮ್ಮನ ಧೈರ್ಯ ಇಂದಿನ ಸಮಾಜದಲ್ಲಿ ಮಹಿಳೆಯರು ಅನುಸರಿಸಬೇಕು ಎಂದರು.

ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಉಡುಪಿಗೆ ಕೃಷ್ಣನಗರಿ ಎಂಬ ಹಿರಿಮೆ ದೊರೆಯುವಲ್ಲಿ ಕಾರಣೀಭೂತರು ಮಧ್ವಾಚಾರ್ಯರು. ಕೃಷ್ಣನ ನಿರಂತರ ಪೂಜೆ ಹಾಗೂ ದ್ವೈತ ತತ್ವದ ಪ್ರಚಾರ ಕ್ಕಾಗಿ ಮಧ್ವಾಚಾರ್ಯರು ಎಂಟು ಮಂದಿ ಪ್ರಮುಖ ಸನ್ಯಾಸಿ ಶಿಷ್ಯರನ್ನು ನೇಮಿಸಿ, ಉಡುಪಿಯ ಅಷ್ಟ ಮಠಗಳನ್ನು ಸ್ಥಾಪಿಸಿದರು ಎಂದರು.

ಉಡುಪಿ ಶ್ರೀವಾದಿರಾಜ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಬಿ. ಗೋಪಾಲಾಚಾರ್ಯರು ಜಗದ್ಗುರು ಶ್ರೀಮಧ್ವಾಚಾರ್ಯರ ಕುರಿತು ಉಪನ್ಯಾಸ ನೀಡಿ, ಭಾರತೀಯ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಸೇವೆ ಸಲ್ಲಿಸಿದ ಮಧ್ವಾಚಾರ್ಯರ ಜಯಂತಿಯನ್ನು ಇಂದು ನಾವು ಸರಕಾರದ ಆದೇಶದಂತೆ ಆಚರಿಸುತ್ತಿರುವುದು ಖುಷಿಯ ವಿಷಯ ಎಂದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಕಿತ್ತೂರು ರಾಣಿ ಚೆನ್ನಮ್ಮರ ಕುರಿತು ಉಪನ್ಯಾಸ ನೀಡಿ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಧೀರ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಕರ್ನಾಟಕದ ಕಿತ್ತೂರು ಸಂಸ್ಥಾನದ ರಾಣಿ. ಬಾಲ್ಯದಲ್ಲಿಯೇ ಬಿಲ್ಲುಗಾರಿಕೆ, ಕತ್ತಿವರಸೆ, ಕುದುರೆಸವಾರಿ ಸೇರಿದಂತೆ ವಿವಿಧ ವಿದ್ಯೆಗಳಲ್ಲಿ ಪರಿಣಿತಿ ಹೊಂದಿದ್ದರು. ಚೆನ್ನಮ್ಮನ ಸ್ವಾಭಿಮಾನ ಮತ್ತು ಹೋರಾಟದ ಮನೋಭಾವ ಅವರನ್ನು ಇತಿಹಾಸದಲ್ಲಿ ಇಂದಿಗೂ ಅಜರಾಮರರನ್ನಾಗಿಸಿವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಅಧ್ಯಕ್ಷ ಜಯರಾಮ ಆಚಾರ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಿರಂಜನ ಚೋಳಯ್ಯ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಉಪನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor