ಸುರೇಶ್

ಉಡುಪಿ, ಅ.23: ಭೂಗತ ಪಾತಕಿ ಹೇಮಂತ್ ಪೂಜಾರಿ ಜೊತೆ ಸೇರಿಕೊಂಡು ಜಿಲ್ಲೆಯ ಉದ್ಯಮಿ ಹಾಗೂ ಗಣ್ಯ ವ್ಯಕ್ತಿಗಳಿಗೆ ಹಣ ನೀಡುವಂತೆ ಬೆದರಿಕೆಯೊಡ್ಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಎರ್ಮಾಳು ಬಡಾ ಗ್ರಾಮದ ಬಟ್ರತೋಟ ಹೌಸ್ ನಿವಾಸಿ ಸುರೇಶ್ ಅಮೀನ್ (38) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಭೂಗತ ಪಾತಕಿ ಹೇಮಂತ ಪೂಜಾರಿ ಉಡುಪಿ ಜಿಲ್ಲೆಯ ಉದ್ಯಮಿ ಹಾಗೂ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿ ಕೊಂಡು ಕರೆ ಮಾಡಿ, ಕೋಟ್ಯಾಂತರ ರೂ.ಗಳಿಗೆ ಬೇಡಿಕೆ ಇಡುತ್ತಿದ್ದು, ಹಣ ಕೊಡದೆ ಇದ್ದಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ 5, ಶಿರ್ವ ಪೊಲೀಸ್ ಠಾಣೆಯಲ್ಲಿ 1, ಕಾಪು ಪೊಲೀಸ್ ಠಾಣೆಯಲ್ಲಿ 1 ಮತ್ತು ಮಣಿಪಾಲ ಪೊಲೀಸ್ ಠಾಣೆಯಲ್ಲಿ 1 ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು.

ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಭೂಗತ ಪಾತಕಿ ಹೇಮಂತ ಪೂಜಾರಿಗೆ ಈ ಪ್ರರಕಣಗಳಲ್ಲಿ ನೊಂದ ಉದ್ದಿಮೆದಾರರ ಹಾಗೂ ಗಣ್ಯ ವ್ಯಕ್ತಿಗಳ ಮೊಬೈಲ್ ನಂಬರ್‌ಗಳನ್ನು ಹಾಗೂ ಇತರ ಮಾಹಿತಿಗಳನ್ನು ನೀಡಿ ಕೃತ್ಯದಲ್ಲಿ ಭಾಗಿಯಾಗಿದ್ದ ಸುರೇಶ್ ಅಮೀನ್‌ನನ್ನು ವಶಕ್ಕೆ ಪಡೆದು ಕೊಂಡರು. ಬಳಿಕ ಆತನನ್ನು ವಿಚಾರಣೆಗೊಳಪಡಿಸಿ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುರೇಶ್ ಅಮೀನ್ ಹಾಗೂ ಹೇಮಂತ ಪೂಜಾರಿ ವಿರುದ್ಧ ದಾಖಲಾದ ಒಟ್ಟು ಪ್ರಕರಣಗಳ ಪೈಕಿಯಲ್ಲಿ ಒಂದು ಪ್ರಕರಣದಲ್ಲಿ ನೊಂದ ಉದ್ದಿಮೆದಾರ ರೊಬ್ಬರು ಬೇಡಿಕೆ ಇಟ್ಟ ಹಣವನ್ನು ಕೊಡದೆ ಇರುವುದರಿಂದ ಹಾಗೂ ಪೋನ್ ಕರೆ ಸ್ವೀಕರಿಸದೆ ಇರುವುದರಿಂದ ಅವರನ್ನು ಕೊಲೆ ಮಾಡಲು ಒಳಸಂಚು ರೂಪಿಸಿರುವುದು ತಾಂತ್ರಿಕ ಸಾಕ್ಷ್ಯದಿಂದ ತಿಳಿದುಬಂದಿದೆ.

ಈ ಕೃತ್ಯಕ್ಕೆ ಸಂಬಂಧಪಟ್ಟಂತೆ ಭೂಗತ ಪಾತಕಿ ಹೇಮಂತ ಪೂಜಾರಿ, ಸುರೇಶ್ ಅಮೀನ್‌ಗೆ 5 ಲಕ್ಷ ರೂ. ಹಣ ಕಳುಹಿಸಿಕೊಟ್ಟಿದ್ದು, ಸುರೇಶ್ ಅಮೀನ್ ಬಳಿ ಇದ್ದ 4,13,000ರೂ. ವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣದಲ್ಲಿ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿರುವ ಸಾದ್ಯತೆಗಳಿರುವುದರಿಂದ ಆರೋಪಿ ಯನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor