ಅ.25ರಿಂದ ರಾಷ್ಟ್ರ ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ
ಕುಂದಾಪುರ, ಅ.23: ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಇವರ ಸಹಯೋಗದಲ್ಲಿ ರಾಷ್ಟ್ರ ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಕುಂದಾಪುರದ ಗಾಂಧಿ ಮೈದಾನದಲ್ಲಿ ಅ.25, 26, 27ರಂದು ನಡೆಯಲಿದೆ ಎಂದು ಎಂದು ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ತಿಳಿಸಿದ್ದಾರೆ.
ಕುಂದಾಪುರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಬಲಿಷ್ಠ ಆರು ತಂಡಗಳು ಪಂದ್ಯಾಟ ದಲ್ಲಿ ಪಾಲ್ಗೊಳ್ಳುತ್ತಿದೆ. ಪಂದ್ಯಾಟದ ಪ್ರಥಮ ಸ್ಥಾನಿ ತಂಡಕ್ಕೆ ಟ್ರೋಫಿಯೊಂದಿಗೆ 4 ಲಕ್ಷ ರೂ. ನಗದು, ದ್ವಿತೀಯ ಸ್ಥಾನಿ ತಂಡಕ್ಕೆ ಟ್ರೋಫಿಯೊಂದಿಗೆ 3 ಲಕ್ಷ ರೂ. ನಗದು, ತೃತೀಯ ಸ್ಥಾನಿ ತಂಡಕ್ಕೆ ಟ್ರೋಫಿಯೊಂದಿಗೆ 2 ಲಕ್ಷ ರೂ. ನಗದು, ಚತುರ್ಥ ಸ್ಥಾನಿ ತಂಡಕ್ಕೆ ಟ್ರೋಫಿಯೊಂದಿಗೆ 1 ಲಕ್ಷ ರೂ. ನಗದು ಹಾಗೂ 6 ಶ್ರೇಷ್ಠ ಪ್ರದರ್ಶನಕ್ಕೆ ಟ್ರೋಫಿ ಯೊಂದಿಗೆ ತಲಾ 25 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.
ದೇಶದ ವಿವಿಧ ರಾಜ್ಯಗಳ ರಾಷ್ಟ್ರಮಟ್ಟದ ಆಟಗಾರರು ಭಾಗವಹಿಸಲಿದ್ದು, ಅನುಭವಿ ತೀರ್ಪುಗಾರರ ಉಪಸ್ಥಿತರಿರ ಲಿದ್ದಾರೆ. ಆರು ತಂಡಗಳನ್ನು ಎರಡು ವಿಭಾಗವಾಗಿ ವಿಂಗಡಿಸಿ, ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ಅ.25ರಂದು ಸಂಜೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಪಂದ್ಯಾಟವನ್ನು ಉದ್ಘಾಟಿಸಲಿರುವರು. ಅ.27 ರಂದು ರಾತ್ರಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ದಿನೇಶ ಹೆಗ್ಡೆ ಮೊಳಹಳ್ಳಿ, ಕುಂದಾಪುರ ವಾಲಿಬಾಲ್ ಅಸೋಸಿಯೇಶನ್ ಗೌರವಾಧ್ಯಕ್ಷ ರಾಜೇಶ್ ಕಾರಂತ್, ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಗೌರವಾಧ್ಯಕ್ಷ ರಾಜೇಶ್ ಕಾವೇರಿ, ಅಧ್ಯಕ್ಷ ರಮಾನಂದ ಕೆ., ಸುಧೀರ್ ಕೆ.ಎಸ್., ವಿಕಾಸ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.