ಮಕ್ಕಳಿಂದ ಜೀವನಾಂಶ ಪಡೆಯುವುದು ಹಿರಿಯ ನಾಗರಿಕರ ಹಕ್ಕು: ನ್ಯಾ.ಶ್ರೀನಿವಾಸ ಕೆ.ಆರ್.
ಕುಂದಾಪುರ, ಅ.28: ಮಕ್ಕಳು ಆಸ್ತಿ ಪಡೆದ ಬಳಿಕ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದೇ, ಪಾಲನೆ -ಪೋಷಣೆ ಸರಿ ಮಾಡದಿದ್ದರೆ ಆ ಆಸ್ತಿ ವಾಪಾಸು ಪಡೆಯುವ ಜತೆಗೆ, ಜೀವನಾಂಶವನ್ನು ಪಡೆಯುವ ಹಕ್ಕು ಹಿರಿಯ ನಾಗರಿಕರಿಗಿದೆ. ಹಿರಿಯ ನಾಗರಿಕರಿಗೆ ಹಳೆ ಸಿಆರ್ಪಿಸಿ 125 ರಡಿ ಹಾಗೂ ಹೊಸ ಕಾಯ್ದೆ 142 ರಡಿ ಅನೇಕ ಹಕ್ಕುಗಳಿವೆ ಎಂದು ಕುಂದಾಪುರದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಶ್ರೀನಿವಾಸ ಕೆ.ಆರ್. ಹೇಳಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಿರಿಯ ನಾಗರಿಕರ ವೇದಿಕೆ ಕುಂದಾಪುರ, ಸಿದ್ದಾಪುರ, ತಾಪಂ ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೇಂದ್ರದ ಅಟಲ್ ವಯೋ ಅಭ್ಯುದಯ ಯೋಜನೆಯ ಹಿರಿಯ ನಾಗರಿಕರ ರಾಜ್ಯ ಕ್ರಿಯಾ ಯೋಜನೆಯಡಿ ಕುಂದಾಪುರ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದಲ್ಲಿ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಿರಿಯ ನಾಗರಿಕರಿಗೆ ಎಲ್ಲ ತಾಲೂಕಿನಲ್ಲೂ ಉಚಿತ ಕಾನೂನು ಸೇವೆ ಕೂಡ ಸಿಗಲಿದೆ. ತಾಲೂಕು ಕಾನೂನು ಸೇವಾ ಪ್ರಾಧಿಕಾರಕ್ಕೆ ತಿಳಿಸಿದರೆ ಎಲ್ಲ ರೀತಿಯ ನೆರವು ಸಿಗಲಿದೆ. ಡಿಸಿ, ಎಸಿ ಕೋರ್ಟ್ನಲ್ಲಿ ಮಾತ್ರವಲ್ಲದೆ ಕೋರ್ಟ್ ಮೂಲಕವು ತಮ್ಮ ಹಕ್ಕು, ರಕ್ಷಣೆ ಪಡೆಯಬಹುದು ಎಂದರು.
ಕುಂದಾಪುರದ ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ. ಮಾತನಾಡಿ, ಪರಿತ್ಯಕ್ತ ಪೋಷಕ ರಿಗೆ ನ್ಯಾಯ ಕೊಡುವ ವ್ಯವಸ್ಥೆ ಇದೆ ಅನ್ನುವುದನ್ನು ತಿಳಿಸುವ ಉದ್ದೇಶದಿಂದ ಇಂತಹ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹಿರಿಯ ನಾಗರಿಕರ ಬಗ್ಗೆ ಎಲ್ಲ ಇಲಾಖೆಗಳಿಗೂ ಜವಾಬ್ದಾರಿಯಿದೆ. ಇನ್ನು ಸೈರ್ಬ ಸುರಕ್ಷತೆ ಬಗ್ಗೆಯೂ ಈ ಕಾಲದಲ್ಲಿ ಅರಿತುಕೊಳ್ಳುವುದು ಅವಶ್ಯಕ ಎಂದು ಹೇಳಿದರು.
ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ಜೆ.ರಾವ್, ಪ್ರಧಾನ ಕಾರ್ಯದರ್ಶಿ ಪಿ.ಜಯಚಂದ್ರ ಶೆಟ್ಟಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಉಮೇಶ್ ಟಿ.ಎಲ್. ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎಂ.ನಿರಂಜನ್ ಭಟ್, ಮಾಹೆ ಮಣಿಪಾಲದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಜಿ. ಮಾಹಿತಿ ನೀಡಿದರು.
ಸಿದ್ದಾಪುರ ತಾಲೂಕು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಭೋಜರಾಜ ಶೆಟ್ಟಿ, ಕುಂದಾಪುರ ಹಿರಿಯ ನಾಗರಿಕರ ವೇದಿಕೆ ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಉಡುಪಿ ಡಿಡಿಆರ್ಸಿಯ ನೋಡಲ್ ಅಧಿಕಾರಿ ಜಯಶ್ರೀ ಸ್ವಾಗತಿಸಿ, ಯೋಜನಾ ಸಹಾಯಕ ಶಿವಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಗ್ಜೋತಿ ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ಎಚ್. ಕಾರ್ಯಕ್ರಮ ನಿರೂಪಿಸಿ, ತಾ.ಪಂ. ಎಂಆರ್ಡಬ್ಯೂ ಮಂಜುನಾಥ್ ಹೆಬ್ಬಾರ್ ವಂದಿಸಿದರು.