ಮಂಗಳೂರು ವಿವಿ ಅಂತರ ಕಾಲೇಜು ಮಹಿಳಾ ವಾಲಿಬಾಲ್: ಉಜಿರೆಯ ಎಸ್ಡಿಎಂ ಕಾಲೇಜಿಗೆ ಚಾಂಪಿಯನ್
ಕಟಪಾಡಿ: ಉಜಿರೆಯ ಎಸ್ಡಿಎಂ ಕಾಲೇಜು ತಂಡ, ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಮೈದಾನದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮಹಿಳೆಯರ ಅಂತರ ಕಾಲೇಜು ವಾಲಿಬಾಲ್ ಟೂರ್ನಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಪ್ರತಿಷ್ಠಿತ ಕೊಳ್ಕೆಬೈಲ್ ಚಂದ್ರಶೇಖರ ಶೆಟ್ಟಿ ಸ್ಮಾರಕ ರೋಲಿಂಗ್ ಟ್ರೋಫಿಯನ್ನು ಕೈಗೆತ್ತಿಕೊಂಡಿತು.
ಎಸ್ಡಿಎಂ ತಂಡ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಬಲಿಷ್ಠ ಆಳ್ವಾಸ್ ಕಾಲೇಜು ಮೂಡಬಿದರೆ ತಂಡವನ್ನು ಮಣಿಸಿದ್ದು, ಆಳ್ವಾಸ್ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಮಂಗಳೂರಿನ ಪದವು ಕಾಲೇಜು ತಂಡ ತೃತೀಯ ಸ್ಥಾನ ಪಡೆದರೆ, ಉಡುಪಿಯ ಎಂಜಿಎಂ ಸಂಧ್ಯಾ ಕಾಲೇಜು ತಂಡ ನಾಲ್ಕನೇ ಸ್ಥಾನ ಪಡೆಯಿತು.
ಚಾಂಪಿಯನ್ ಎಸ್ಡಿಎಂ ಕಾಲೇಜು ಉಜಿರೆ ಜಸ್ಲಿನ್ ಅತ್ಯುತ್ತಮ ಪಾಸರ್, ಶ್ರೀಯಾ ಅತ್ಯುತ್ತಮ ಆಕ್ರಮಣಕಾರಿ ಆಟಗಾರ್ತಿ ಹಾಗೂ ಆಳ್ವಾಸ್ ಮೂಡಬಿದರೆ ತಂಡದ ಚಂದ್ರಿಕಾ ಅತ್ಯುತ್ತಮ ಆಲ್ರೌಂಡರ್ ವೈಯಕ್ತಿಕ ಪ್ರಶಸ್ತಿಗಳಿಗೆ ಭಾಜರಾದರು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಕಟಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಈ ಟೂರ್ನಿ ಆಯೋಜನೆಗೊಂಡಿದ್ದು, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಚಾಂಪಿಯನ್ಷಿಪ್ನ್ನು ಉದ್ಘಾಟಿಸಿದ್ದರು.
ಕಾರ್ಯಕ್ರಮದಲ್ಲಿ ತ್ರಿಶಾ ಗ್ರೂಪ್ ಆಫ್ ಸಂಸ್ಥೆಯ ಸಂಸ್ಥಾಪಕ ಸಿ.ಎ. ಗೋಪಾಲಕೃಷ್ಣ ಭಟ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜಾ, ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಮಾಜಿ ಜಿಪಂ ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ತ್ರಿಶಾ ವಿದ್ಯಾ ಕಾಲೇಜಿನ ವಿಘ್ನೇಶ್ ಶೆಣೈ ಬಿ., ತ್ರಿಶಾ ವಿದ್ಯಾ ಸಂದ್ಯಾ ಕಾಲೇಜಿನ ಪ್ರಾಂಶುಪಾಲ ಕುಲದೀಪ್ ವೈ ಯು, ಅಕಾಡೆಮಿಕ್ ಮ್ಯಾನೇಜರ್ ಶಾಂತಪ್ರಿಯ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶಶಿಕಿರಣ ಉಪಸ್ಥಿತರಿದ್ದರು.
ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಕೆ. ಉದಯಕುಮಾರ್ ಶೆಟ್ಟಿ, ಕಟಪಾಡಿ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಟ್ರಸ್ಟಿ ಬಿ. ಚಂದ್ರಕಾಂತ್ ಪೈ, ಉದ್ಯಮಿ ಪ್ರಸಾದ್ರಾಜ್ ಕಾಂಚನ್ ಹಾಗೂ ರಾಮಪ್ರಭು ಉಪಸ್ಥಿತರಿದ್ದರು.
ವಿದ್ವಾನ್ ವಾಗೀಶ್ ಆಚಾರ್ಯ ಹಾಗೂ ಪಲ್ಲವಿ ಕೊಡಗು ಕಾರ್ಯಕ್ರಮ ನಿರೂಪಿಸಿ, ಧೀರಜ್ ಬೆಳ್ಳಾರೆ ವಂದಿಸಿದರು.