ಉಡುಪಿ, ಅ.28: ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಹಾಗೂ ಮಹಿಳೆಯ ಕ್ರಾಸ್‌ಕಂಟ್ರಿ (ಗುಡ್ಡಗಾಡು ಓಟ) ಚಾಂಪಿಯನ್‌ಷಿಪ್ ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮುಂದಿನ ನವೆಂಬರ್ 7ರಂದು ತೆಂಕನಿಡಿಯೂರು ಕಾಲೇಜಿನಲ್ಲಿ ನಡೆಯಲಿದೆ ಎಂದು ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮಂಗಳೂರು ವಿವಿ, ಜಿಲ್ಲಾಡಳಿತ ಹಾಗೂ ತೆಂಕನಿಡಿಯೂರು ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಈ ಪ್ರತಿಷ್ಠಿತ ಸ್ಪರ್ಧೆ ನಡೆಯಲಿದೆ ಎಂದವರು ತಿಳಿಸಿದರು.

ಚಾಂಪಿಯನ್‌ಷಿಪ್‌ನ ವಿವರಗಳನ್ನು ನೀಡಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಸ್ಪರ್ಧೆ ನವೆಂಬರ್ 7ರ ಮುಂಜಾನೆ 6:30ಕ್ಕೆ ತೆಂಕನಿಡಿಯೂರು ಕಾಲೇಜಿನ ಕ್ರೀಡಾಂಗಣದಿಂದ ಪ್ರಾರಂಭಗೊಂಡು ಅಲ್ಲೇ 8:30ರ ಸುಮಾರಿಗೆ ಮುಕ್ತಾಯಗೊಳ್ಳಲಿದೆ. 10ಕಿ.ಮೀ. ದೂರದ ಈ ಸ್ಪರ್ಧೆಯ ರೂಟ್‌ಮ್ಯಾಪ್‌ನ್ನು ವಿವಿ ತಾಂತ್ರಿಕ ತಂಡ ಬಂದು ಶೀಘ್ರವೇ ಅಂತಿಮಗೊಳಿಸಲಿದೆ ಎಂದರು.

ದೇಶದಾದ್ಯಂತದಿಂದ ಸುಮಾರು 300 ವಿಶ್ವವಿದ್ಯಾಲಯಗಳಿಂದ 1200 ಪುರುಷ ಹಾಗೂ 800ಕ್ಕೂ ಅಧಿಕ ಮಹಿಳಾ ಕ್ರಾಸ್‌ಕಂಟ್ರಿ ಓಟದ ಸ್ಪರ್ಧಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿ ವಿವಿಯಿಂದ ಗರಿಷ್ಠ ಆರು ಮಂದಿಯ ತಂಡ ಭಾಗವಹಿಸಲು ಅವಕಾಶವಿದೆ ಎಂದವರು ಹೇಳಿದರು.

ಆತಿಥೇಯ ಮಂಗಳೂರು ವಿವಿ ಪುರುಷ ಮತ್ತು ಮಹಿಳಾ ತಂಡಗಳು ಅಖಿಲ ಭಾರತ ಅಂತರ ವಿವಿ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್‌ನ ಹಾಲಿ ಚಾಂಪಿಯನ್ ತಂಡಗಳಾಗಿದ್ದು, ಈ ಬಾರಿಯೂ ಪ್ರಶಸ್ತಿ ಉಳಿಸಿಕೊಳ್ಳುವ ನೆಚ್ಚಿನ ತಂಡವಾಗಿದೆ ಎಂದು ಡಾ.ರೋಶನ್‌ಕುಮಾರ್ ಶೆಟ್ಟಿ ತಿಳಿಸಿದರು.

ಕ್ರಾಸ್‌ಕಂಟ್ರಿ ಸ್ಪರ್ಧೆಯಲ್ಲಿ ದೇಶದ ಬಲಿಷ್ಠ ವಿವಿ ತಂಡಗಳಾದ ರೋಹಟಕ್‌ನ ಮಹರ್ಷಿ ದಯಾನಂದ ವಿವಿ, ಕೊಲ್ಲಾಪುರದ ಶಿವಾಜಿ ವಿವಿ, ಕೊಟ್ಟಾಯಂನ ಮಹಾತ್ಮಗಾಂಧಿ ವಿವಿ, ಪಟಿಯಾಲದ ಪಂಜಾಬ್ ವಿವಿ ಹಾಗೂ ಜಾನಪುರದ ಪೂರ್ವಾಂಚಲ ವಿವಿ ತಂಡಗಳು ಇಲ್ಲಿ ಸ್ಪರ್ಧಿಸುತ್ತಿವೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನಿತ್ಯಾನಂದ ವಿ. ಗಾಂವ್ಕರ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಪ್ರಖ್ಯಾತ್ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಧನಂಜಯ ಅಮೀನ್, ಪ್ರವೀಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor