ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಯೋಜನೆಯಡಿ ನೋಂದಾಯಿಸಿ : ಯು. ನಿಸಾರ್ ಅಹ್ಮದ್
ಉಡುಪಿ, ಅ.28: ಜಿಲ್ಲೆಯ ಅಸಂಘಟಿತ ಕಾರ್ಮಿಕರು ಇ-ಶ್ರಮ್ ಯೋಜನೆಯಡಿ ನೋಂದಾಯಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಅಲ್ಲಲ್ಲಿ ಶಿಬಿರಗಳನ್ನು ನಡೆಸಿ ಅಲ್ಪಸಂಖ್ಯಾತ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಗುರುತಿನ ಚೀಟಿಗಳನ್ನು ಸ್ಥಳದಲ್ಲಿಯೇ ನೀಡಬೇಕು. ಹಾಗೂ ನೋಂದಣಿಯಾದ ಕಾರ್ಮಿಕರಿಗೆ ಟೂಲ್ಕಿಟ್ಗಳನ್ನು ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ವಿತರಿಸುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಇದರಿಂದ ಜಿಲ್ಲೆಯಲ್ಲಿ ಕಾರ್ಮಿಕರ ನೋಂದಣಿ ಪ್ರಮಾಣ ಹೆಚ್ಚುವುದ ರೊಂದಿಗೆ ಕಾರ್ಮಿಕರು ಹೆಚ್ಚೆಚ್ಚು ಸರಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯ ವಾಗಲಿದೆ ಎಂದು ಅವರು ಅಲ್ಪಸಂಖ್ಯಾತರ ವಿವಿಧ ವರ್ಗದ ಕಾರ್ಮಿಕರ ಅಂಕಿ-ಸಂಖ್ಯೆಗಳ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು ತಿಳಿಸಿದರು.
ಬೀದಿ ವ್ಯಾಪಾರಿಗಳ ನೋಂದಣಿ: ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸ ಬೇಕು. ಈಗಾಗಲೇ 5,500 ಬೀದಿಬದಿ ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಿಗಾಗಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಜಾರಿಗೊಳಿಸಲಾಗಿದೆ.ಈ ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಮೇಲಾಧರ ರಹಿತ ಸಾಲ ಪಡೆಯಲು ಅವಕಾಶವಿದೆ. ಮೊದಲ ಹಂತದಲ್ಲಿ 10,000ರೂ., ಎರಡನೇ 25,000ರೂ. ಮತ್ತು ಮೂರನೇ ಹಂತದಲ್ಲಿ 50,000 ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಇದು ಸಕಾಲಿಕ ಮರುಪಾವತಿಗೆ ಒಳಪಟ್ಟಿರುತ್ತದೆ. ಈ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದರು.
ಕೌಶಲ್ಯಾಭಿವೃದ್ಧಿ ತರಬೇತಿ: ಜಿಲ್ಲೆಯಲ್ಲಿ 7 ಸರಕಾರಿ, 4 ಅನುದಾನಿತ ಹಾಗೂ 1 ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಗಳಿದ್ದು, ಸಂಸ್ಥೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು. ಹೊರದೇಶಗಳಲ್ಲಿ ಉದ್ಯೋಗ ಪಡೆಯಲು ಅನುಕೂಲ ವಾಗುವಂತೆ ಓವರ್ ಸಿ- ಎಂಪ್ಲಾಯ್ಮೆಂಟ್ ಸೆಲ್ನ ಮಾಹಿತಿ ಪಡೆದು ಸ್ಥಳೀಯವಾಗಿ ಪ್ರಚಾರ ಪಡಿಸಿದ್ದಲ್ಲಿ ಉದ್ಯೋಗ ಪಡೆಯಲು ಅನುಕೂಲ ವಾಗುತ್ತದೆ ಇದಕ್ಕೆ ಒತ್ತು ನೀಡಬೇಕು ಎಂದರು.
ಜಿಲ್ಲೆಯಲ್ಲಿ 1,522 ಅಂಗನವಾಡಿಗಳಿದ್ದು,ಇವುಗಳಲ್ಲಿ 155 ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಪಟ್ಟ ಅಂಗನವಾಡಿಗಳು ಇವೆ. ಅಂಗನವಾಡಿ ಕೇಂದ್ರಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದವರನ್ನು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ನೇಮಕಗೊಳ್ಳುವಂತೆ ನೋಡಿ ಕೊಳ್ಳಬೇಕು. ಅಧಿಕಾರಿಗಳು ಆಗಾಗ ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಹಾಜರಾತಿ ರಿಜಿಸ್ಟರ್ನಲ್ಲಿ ನಮೂದಿಸಿರುವಂತೆ ಎಲ್ಲಾ ಮಕ್ಕಳು ಹಾಜರಾ ಗುತ್ತಿದ್ದಾರಾ ಎಂಬುದನ್ನು ಪರಿಶೀಲಿಸಬೇಕು. ಬಾಣಂತಿಯರಿಗೆ ಪೌಷ್ಠಿಕ ಆಹಾರ ಸರಿಯಾಗಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಅಲ್ಪಸಂಖ್ಯಾತ ಸಮುದಾಯದ 8563 ಫಲಾನುಭವಿಗಳು ಬ್ಯಾಂಕ್ಗಳಲ್ಲಿ ವಿವಿಧ ಚಟುವಟಿಕೆಗಾಗಿ ಸಾಲ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಬ್ಯಾಂಕ್ ಗಳಿಂದ ಶೈಕ್ಷಣಿಕ ಸಹಾಯಧನ ಸೌಲಭ್ಯಗಳು ಲಭ್ಯವಿದ್ದು, ಇದರ ಸದುಪಯೋಗವನ್ನು ಸಮುದಾಯದ ಅರ್ಹ ವಿದ್ಯಾರ್ಥಿಗಳು ಪಡೆದು ಕೊಳ್ಳಬೇಕು ಎಂದು ನಿಸಾರ್ ಅಹ್ಮದ್ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಯಾವುದೇ ರೀತಿಯ ಮತೀಯ ಗಲಭೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಕೋಮು ಸೌಹಾರ್ದತೆಗೆ ಆದ್ಯತೆ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಮತೀಯ ಭಾವನೆಗಳನ್ನು ಕೆರಳಿಸುವ ಪ್ರಯತ್ನ ನಡೆದಲ್ಲಿ ಅವುಗಳನ್ನು ನಿರ್ಲಕ್ಷಿಸದೇ, ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಅವರು, ಪ್ರಸ್ತುತ ಜಿಲ್ಲೆಯಲ್ಲಿ ಈ ಸಂಬಂಧದ ಪ್ರಕರಣಗಳ ಸಂಪೂರ್ಣ ವಿವರಗಳನ್ನು ನೀಡುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿ ಸಿದ್ದು, ಅವುಗಳ ಸಂಪೂರ್ಣ ಪ್ರಯೋಜನ ಸಮುದಾಯದ ಜನರು ಪಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಸಾಂವಿಧಾನಿಕವಾಗಿ ಪ್ರತಿಯೊಬ್ಬ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು. ಯಾವೊಬ್ಬ ಮಗು ಸಹ ಶಾಲೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಬಗ್ಗೆ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಲಿವೆ ಎಂದು ನುಡಿದರು.
ಸಭೆಯಲ್ಲಿ ಆಯೋಗದ ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಎಎಸ್ಪಿ ಸುಧಾಕರ ನಾಯಕ್, ಅಲ್ಪಸಂಖ್ಯಾತ ಸಮುದಾಯದ ಜಿಲ್ಲಾ ಅಧಿಕಾರಿ ಜಿನೇಂದ್ರ ಎಂ., ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಅನುಷ್ಠ್ಠಾನ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಹೆಚ್ಚಿಸಿ
ಸರಕಾರಿ ಶಾಲೆಗಳಿಗೆ ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ಸಂಖ್ಯೆ 25ರಿಂದ 30 ಕಂಡುಬಂದಿದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗಿದೆ. ಇದಕ್ಕೆ ಇಲಾಖೆ ಅಧಿಕಾರಿಗಳು ಒತ್ತುನೀಡಬೇಕು. ಇದರ ಜೊತೆಯಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ವಿರುವ ಮೂಲಭೂತ ಸೌಕರ್ಯ ಗಳನ್ನು ಒದಗಿಸಬೇಕು. ಡಿಡಿಪಿಐ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ, ಪರಿಶೀಲಿಸುತ್ತಿರಬೇಕು ಎಂದು ನಿಸಾರ್ ಅಹ್ಮದ್ ಹೇಳಿದರು.
ಶಿಕ್ಷಣ ಸಮಾಜದಲ್ಲಿ ಬದಲಾವಣೆ ತರುತ್ತದೆ. ಗುಣಮಟ್ಟದ ಶಿಕ್ಷಣವು ಮಕ್ಕಳನ್ನು ಜವಾಬ್ದಾರಿಯುತ ನಾಗರೀಕ ನಾಗಿಸುತ್ತದೆ. ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ, ಬುದ್ಧ ಹಾಗೂ ಪಾರ್ಸಿ ಸಮುದಾಯದ ಮಕ್ಕಳು ಸೇರಿದಂತೆ ಯಾವೊಬ್ಬ ಮಗುವೂ ಶಿಕ್ಷಣದಿಂದ ಹೊರಗುಳಿಯದಂತೆ ನೋಡಿ ಕೊಳ್ಳಬೇಕು ಎಂದರು.
ಅಲ್ಪಸಂಖ್ಯಾತ ಸಮುದಾಯದ 5,804 ಮಂದಿ ಕೃಷಿ ಚಟುವಟಿಕೆಯಲ್ಲಿ
ಕೃಷಿ ಇಲಾಖೆಯಿಂದ ಅಲ್ಪಸಂಖ್ಯಾತ ಸಮುದಾಯದವರಿಗೆ 9 ಯೋಜನೆ ಗಳನ್ನು ಅನುಷ್ಠಾನಗೊಳಿಸಲಾಗಿವೆ. ಜಿಲ್ಲೆಯಲ್ಲಿಅಲ್ಪಸಂಖ್ಯಾತ ಸಮುದಾಯದ 5,804 ಮಂದಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ 3,339 ಮಂದಿ ಕೃಷಿಭೂಮಿಯನ್ನು ಹೊಂದಿದ್ದಾರೆ. 409 ಮಂದಿ ಅಲ್ಪಸಂಖ್ಯಾತ ಸಮುದಾಯದವರು ಕೃಷಿ ಯೋಜನೆಗಳ ಸೌಲಭ್ಯ ಪಡೆದಿದ್ದು, ಸೌಲಭ್ಯ ಪಡೆದ ಫಲಾನುಭವಿಗಳ ವಿವರ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ ನಿಸಾರ್ ಅಹ್ಮದ್, ತೋಟಗಾರಿಕೆ ಇಲಾಖೆಯಡಿ ಅಲ್ಪಸಂಖ್ಯಾತ ಸಮುದಾಯಕ್ಕೆ 9 ಯೋಜನೆಗಳನ್ನು ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ 151 ಗುರಿಯಲ್ಲಿ 142 ಗುರಿ ಸಾಧನೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಜನರು ಇಲಾಖೆಯ ಯೋಜನೆಯ ಲಾಭ ಪಡೆಯುವಂತೆ ಆಗಬೇಕು ಎಂದರು.