ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ಗೆ ‘ವಿಶು ಕುಮಾರ್ ಪ್ರಶಸ್ತಿ’
ಉಡುಪಿ, ಅ.29: ಸಾಹಿತ್ಯ, ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ದಿವಂಗತ ವಿಶು ಕುಮಾರ್ ಸ್ಮರಣಾರ್ಥ ಯುವ ವಾಹಿನಿ ಸಂಸ್ಥೆ ನೀಡುವ 2026ನೇ ಸಾಲಿನ ಪ್ರತಿಷ್ಠಿತ ವಿಶು ಕುಮಾರ್ ಪ್ರಶಸ್ತಿಗೆ ಜಾನಪದ ವಿದ್ವಾಂಸ, ಸಾಹಿತಿ, ಸಂಶೋಧಕ ಬನ್ನಂಜೆ ಬಾಬು ಅಮೀನ್ ಆಯ್ಕೆಯಾಗಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡುವ ಡಾ.ಪ್ರಭಾಕರ್ ನೀರ್ ಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿಗೆ ಯುವ ಸಾಹಿತಿ ತಜ್ಞಾ ಆರ್. ಆಯ್ಕೆಯಾಗಿದ್ದಾರೆ.
ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರೊಂದಿಗೆ ವಿಶುಕುಮಾರ್ ದತ್ತಿನಿಧಿ ಸಮಿತಿ ಸಹಯೋಗದಲ್ಲಿ ವಿಶು ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ನ.1ರಂದು ಬೆಳಗ್ಗೆ ಗಂಟೆಗೆ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ ಎಂದರು.
ಸಮಾರಂಭವನ್ನು ಹಿರಿಯ ಸಾಹಿತಿ ಬಿಪಿನ್ ಚಂದ್ರಪಾಲ್ ನಕ್ರೆ ಉದ್ಘಾಟಿಸಲಿರುವರು. ಪ್ರಶಸ್ತಿಯನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್ನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪ್ರದಾನ ಮಾಡಲಿರುವರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಂ ಪೂಜಾರಿ ಅಭಿನಂದನಾ ನುಡಿಗಳನ್ನಾಡಲಿರುವರು.
ಕಾರ್ಯಕ್ರಮ ಅಂಗವಾಗಿ ಏರ್ಪಡಿಸಲಾದ ಸಿನಿದನಿ ಕಿರುಚಿತ್ರ ಸ್ಪರ್ಧೆ, ಜ್ಞಾನ ಮಂಥನ ರಸಪ್ರಶ್ನೆ ಸ್ಪರ್ಧೆ, ವಿಶು ಕಾವ್ಯಾಮೃತ ಕವನ ಸ್ಪರ್ಧೆ ಹಾಗೂ ವಿಶು ವಿಹಂಗಮ ಕೃತಿ ವಿಮರ್ಶೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶು ಕುಮಾರ್ ದತ್ತಿನಿಧಿ ಸಂಚಾಲನಾ ಸಮಿತಿಯ ಸಂಚಾಲಕ ಜಗದೀಶ್ ಕುಮಾರ್ ಉಡುಪಿ, ಸಹಸಂಚಾಲಕ ದಯಾನಂದ ಕರ್ಕೇರ ಉಗ್ಗೇಲ್ಬೆಟ್ಟು, ಉಡುಪಿ ಯುವವಾಹಿನಿ ಅಧ್ಯಕ್ಷ ವಿನೋದ್ ಮಂಚಿ, ಸತೀಶ್ ಕಿಲ್ಬಾಡಿ, ಸುಪ್ರೀತ್ ಸುವರ್ಣ ಉಪಸ್ಥಿತರಿದ್ದರು.