ಮೆಸ್ಕಾಂ ಇಲಾಖೆಯ ವೈಫಲ್ಯ ಖಂಡಿಸಿ ಪಂಜಿನ ಮೆರವಣಿಗೆ
ಉಡುಪಿ, ಅ.28: ಬಿಜೆಪಿ ಉಡುಪಿ ನಗರ ವತಿಯಿಂದ ಮೆಸ್ಕಾಂ ವೈಫಲ್ಯ ಖಂಡಿಸಿ ಪಂಜಿನ ಮೆರವಣಿಗೆ ಮತ್ತು ಪ್ರತಿಭಟನಾ ಜಾಥವನ್ನು ಬುಧವಾರ ಸಂಜೆ ಉಡುಪಿ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ಬೋರ್ಡ್ ಹೈಸ್ಕೂಲ್ ಬಳಿಯಿಂದ ಆರಂಭಗೊಂಡ ಪಂಜಿನ ಮೆರವಣಿಗೆ ಕೆ.ಎಂ.ಮಾರ್ಗವಾಗಿ ಸಾಗಿ ಡಯಾನಾ ಸರ್ಕಲ್ನಿಂದ ಮೆಸ್ಕಾಂ ಕಚೇರಿ ಬಳಿ ಸಮಾಪನಗೊಂಡಿತು.
ಬಳಿಕ ನಡೆದ ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲೆಯಾದ್ಯಂತ ನಿರಂತರ ಪವರ್ ಕಟ್, ಲೋ ವೋಲ್ಟೇಜ್ ಸಮಸ್ಯೆ, ವಿದ್ಯುತ್ ಕಣ್ಣಾಮುಚ್ಚಾಲೆ, ಟ್ರಾನ್ಸ್ಫಾರ್ಮರ್ ಕೊರತೆ, ಕಳಪೆ ನಿರ್ವಹಣೆ, ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಮೊದಲಾದ ಸಂಸ್ಯೆಗಳಿಂದ ಜಿಲ್ಲೆಯ ಜನತೆ ಸಮಸ್ಯೆ ಎದುರಿಸುವಂತಾಗಿದೆ. ರಾಜ್ಯ ಸರಕಾರ ತಕ್ಷಣ ಮೆಸ್ಕಾಂ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿ ಜಿಲ್ಲೆಯ ಜನತೆಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಮುಖಂಡರಾದ ಮಟ್ಟಾರು ರತ್ನಾಕರ ಶೆಟ್ಟಿ, ಪ್ರಭಾಕರ ಪೂಜಾರಿ, ದಿನಕರ ಹೆರ್ಗ, ಸುಪ್ರಸಾದ್ ಶೆಟ್ಟಿ, ದಿನಕರ ಬಾಬು ಮೊದಲಾದವರು ಉಪಸ್ಥಿತರಿದ್ದರು.