ಉಡುಪಿ, ನ.3: ಪಿಂಚಣಿ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಉಡುಪಿಯ ಇಪಿಎಫ್‌ಒ ಪ್ರಾದೇಶಿಕ ಕಚೇರಿಯು ಅತ್ಯುತ್ತಮ ಕಚೇರಿಯಾಗಿ ಹೊರಹೊಮ್ಮಿದ್ದು ಭವಿಷ್ಯನಿಧಿ-2026 ಪ್ರಶಸ್ತಿಗೆ ಭಾಜನವಾಗಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆಯ ಉಡುಪಿ ಪ್ರಾದೇಶಿಕ ಕಚೇರಿಯ ಪಿಂಚಣಿ ಆಡಳಿತ ಮತ್ತು ಸೇವಾ ವಿತರಣೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಯನ್ನು ಗುರುತಿಸಿ, ಪಿಂಚಣಿ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಅತ್ಯುತ್ತಮ ಕಚೇರಿ ವಿಭಾಗದಲ್ಲಿ 2026ರ ಪ್ರತಿಷ್ಠಿತ ಭವಿಷ್ಯ ನಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ನವೆಂಬರ್ 1ರಂದು ಹೊಸದಿಲ್ಲಿ ಚಾಣಕ್ಯಪುರಿಯ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಇಪಿಎಫ್‌ಒನ 74ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವೀಯ ಹಾಗೂ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಉಪಸ್ಥಿತಿ ಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇಪಿಎಫ್‌ಒ ಪ್ರಾದೇಶಿಕ ಕಚೇರಿ ಉಡುಪಿ ಇದರ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ- ಶಶಿಕಾಂತ್ ದಹಿಯಾ ತಮ್ಮ ಕಚೇರಿಯ ಪರವಾಗಿ ಪ್ರಶಸ್ತಿ ಯನ್ನು ಸ್ವೀಕರಿಸಿದರು.

ಪಿಂಚಣಿದಾರರಿಗೆ ದಕ್ಷ, ಸಕಾಲಿಕ ಮತ್ತು ಗುಣಮಟ್ಟದ ಪಿಂಚಣಿ ಸೇವೆಗಳನ್ನು ಖಾತ್ರಿಪಡಿಸುವಲ್ಲಿ ಉಡುಪಿ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಮತ್ತು ನೌಕರರ ಸಮರ್ಪಿತ ಪ್ರಯತ್ನಗಳು, ಬದ್ಧತೆ ಮತ್ತು ತಂಡದ ಕಾರ್ಯಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ. ಸೇವಾ ವಿತರಣೆ, ಕಾರ್ಯಾಚರಣೆಯ ದಕ್ಷತೆ ಮತ್ತು ಸಾಮಾಜಿಕ ಭದ್ರತಾ ಚೌಕಟ್ಟನ್ನು ಬಲಪಡಿಸುವತ್ತ ಕಚೇರಿಯ ನಿರಂತರ ಗಮನವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಉಡುಪಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಈ ಸಾಧನೆಯು ಉಡುಪಿಯ ಇಪಿಎಫ್‌ಒ ಪ್ರಾದೇಶಿಕ ಕಚೇರಿಗೆ ಹೆಮ್ಮೆಯ ವಿಷಯವಾಗಿದ್ದು, ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ಹಾಗೂ ಪಾಲುದಾರರಿಗೆ ಅತ್ಯುನ್ನತ ಗುಣಮಟ್ಟದ ಸೇವೆಯನ್ನು ಕಾಯ್ದುಕೊಳ್ಳಲು ಪ್ರೇರಣೆ ಯಾಗಿದೆ ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ಶಶಿಕಾಂತ್ ದಹಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor