ಉಡುಪಿ, ನ.3: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿ ರೇವಂತ ಇವರ ಬಡಕುಟುಂಬಕ್ಕೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ, ಅಮೇರಿಕಾದ ಡಾ.ಸುದರ್ಶನ ಮೂರ್ತಿ ಮತ್ತು ಡಾ. ಲಕ್ಷ್ಮೀಮೂರ್ತಿ ದಂಪತಿ ನಿರ್ಮಿಸಿದ ನೂತನ ಮನೆ ‘ಪ್ರಾಣ ವಿಠಲ’ ವನ್ನು ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮನೆಯನ್ನು ರೇವಂತ ಹಾಗೂ ಹೆತ್ತವರಾದ ಚಂದ್ರ ನಾಯ್ಕ್ ಮತ್ತು ಲಕ್ಷ್ಮೀ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಸೋದೆ ಶ್ರೀಗಳು, ಯಕ್ಷಗಾನ ಕಲಾರಂಗ ಕಾರ್ಯಕರ್ತರ ನಿಸ್ವಾರ್ಥ ದುಡಿಮೆ ಮತ್ತು ವಿಶ್ವಾಸಾರ್ಹತೆಯಿಂದ ಇದು ಸಾಧ್ಯವಾಗಿದೆ. ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಅನುಕರಣೀಯ ಎಂದರು.

ಡಾ.ಸುದರ್ಶನ ಮೂರ್ತಿ ಮಾತನಾಡಿ, ಜನರ ಸೇವೆಯಲ್ಲಿ ಜನಾರ್ದನನ್ನು ಕಾಣುವ ಕಲಾರಂಗದ ಮೂಲಕ ಬಡಕುಟುಂಬಕ್ಕೆ ನೆರವಾಗಿರುವುದು ಸಂತೋಷ ತಂದಿದೆ ಎಂದರು. ಯು.ಎಸ್.ರಾಜಗೋಪಾಲ ಆಚಾರ್ಯ, ಎಂ.ಎಸ್.ಶ್ರೀಪಾದ, ಇಂದಿರಾ ಎಸ್. ಮೂರ್ತಿ, ಬಾಲಕೃಷ್ಣ್ಣ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರಾದ ಯು.ವಿಶ್ವನಾಥ ಶೆಣೈ, ವಿಜಯ ಕುಮಾರ ಮುದ್ರಾಡಿ, ಭುವನ ಪ್ರಸಾದ ಹೆಗ್ಡೆ, ಸೀತಾರಾಮ ಭಟ್, ಯು.ಅನಂತರಾಜ ಉಪಾಧ್ಯ, ನಟರಾಜ ಉಪಾಧ್ಯಾಯ, ಮರ್ಣೆ ಉಮೇಶ್ ಭಟ್, ಎಲ್ಲೂರು ಗಣೇಶ ರಾವ್, ಆರ್.ವಸಂತ, ಸಾಮಾಜಿಕ ಕಾರ್ಯಕರ್ತ ಗಿರೀಶ್ ಉಡುಪ ನುಕ್ಕೂರು ಮತ್ತು ನಾಲ್ಕೂರಿನ ಸರಕಾರಿ ಪ್ರೌಢಶಾಲೆಗಳ ಮುಖ್ಯೋಪಾ ಧ್ಯಾಯರಾದ ಸುಜಾತ ಮೇಡಂ, ಕೃಷ್ಣ ನಾಯ್ಕ ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor