ನಿಟ್ಟೆ, ನ.7: ನೈತಿಕತೆ ಹಾಗೂ ರಾಷ್ಟ್ರೀಯತಾ ಭಾವನೆ ಇಲ್ಲದ ಜ್ಞಾನ ಅಪಾಯಕಾರಿಯಾಗಿ ಪರಿಣಮಿಸಬಹುದು. ಸಹಾನುಭೂತಿ ಹಾಗೂ ಮಾನವೀಯತೆ ಇಲ್ಲದ ಪ್ರತಿಭೆ ಟೊಳ್ಳಾಗಿರುತ್ತದೆ ಎಂದು ಬ್ರಹ್ಮೋಸ್, ಆಸ್ಟ್ರಾದಂಥ ಕ್ಷಿಪಣಿಗಳನ್ನು ನಿರ್ಮಿಸಿದ ತಂಡದ ಸದಸ್ಯ, ಪುಣೆಯ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಟೆಕ್ನಾಲಜಿಯ ಮಾಜಿ ನಿರ್ದೇಶಕ ಹಾಗೂ ಬೆಂಗಳೂರಿನ ಎಸ್.ವ್ಯಾಸಾ ವಿವಿಯ ಕುಲಪತಿ ಡಾ.ಪ್ರಹ್ಲಾದ್ ರಾಮರಾವ್ ಹೇಳಿದ್ದಾರೆ.

ನಿಟ್ಟೆ ಆಫ್-ಕ್ಯಾಂಪಸ್ ಸೆಂಟರ್‌ನಲ್ಲಿ ಶನಿವಾರ ನಡೆದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ 16ನೇ ಘಟಕೋತ್ಸ ವದ ಎರಡನೇ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು ಘಟಕೋತ್ಸವ ಭಾಷಣ ಮಾಡುತಿದ್ದರು.

ಭಾರತಕ್ಕಿಂದು ಕೇವಲ ಪದವೀಧರರ ಅಗತ್ಯವಿರುವುದಲ್ಲ. ಪ್ರಾಮಾಣಿಕ, ಕೌಶಲ್ಯ ಹೊಂದಿದ, ದೇಶದ ಅಗತ್ಯತೆ ಯನ್ನು ಮನಗಂಡು ಹೊಸದನ್ನು ಅನ್ವೇಷಿಸುವ ಪದವೀಧರರು ಬೇಕಾಗಿದ್ದಾರೆ. ನಗರ ಹಾಗೂ ಗ್ರಾಮಗಳ ನಡುವೆ, ಸಂಶೋಧನೆ ಹಾಗೂ ಉದ್ದಿಮೆ, ಸಾಂಪ್ರದಾಯ ಹಾಗೂ ಹೊಸ ಆವಿಷ್ಕಾರದ ನಡುವೆ ಸೇತುವೆ ಕಟ್ಟುವವರು ಬೇಕಾಗಿದ್ದಾರೆ ಎಂದು ಡಾ. ರಾಮರಾವ್ ಅಭಿಪ್ರಾಯಪಟ್ಟರು.

ನಿಮ್ಮ ಪರಿಣಿತ ಕ್ಷೇತ್ರವನ್ನು ಮೀರಿ ಅಧ್ಯಯನದ ಅಭ್ಯಾಸ ಬೆಳೆಸಿಕೊಳ್ಳಿ, ಹಿತಕರವಲ್ಲದ ಪ್ರಶ್ನೆಗಳನ್ನು ಕೇಳುವ ಧೈರ್ಯವನ್ನು ಬೆಳೆಸಿಕೊಳ್ಳಿ, ಎಲ್ಲರು ತುಳಿಯುವ ದಾರಿಯನ್ನು ಬಿಟ್ಟು ಮೂಲಭೂತ ಅಂಶಗಳನ್ನು ಗಟ್ಟಿಗೊಳಿಸುವ ತಾಳ್ಮೆಯನ್ನು ಬೆಳೆಸಿಕೊಳ್ಳಿ, ನಿಮಗಿಂತಲೂ ಬೇರೆ ರೀತಿಯಲ್ಲಿ ಮಾತನಾಡುವ ಪ್ರತಿಭೆಗಳ ತಂಡವನ್ನು ಬೆಳೆಸಿ ಎಂದು ಅವರು ಇಂದು ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪದವೀಧರರಾಗಿ ನೀವು ಪ್ರವೇಶಿಸುವ ಜಗತ್ತು, ಹಿಂದೆಂದಿಗಿಂತಲೂ ವೇಗವಾಗಿ ಬದಲಾಗುತ್ತಿದೆ. ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ- ಎಐ, ಬಯೋಸಾಯನ್ಸ್, ಮೊಬಿಲಿಟಿ, ಮೂಲಭೂತ ಸೌಕರ್ಯ, ಕ್ಲೈಮೆಟ್ ಬದಲಾವಣೆ,, ರಕ್ಷಣೆ, ಕೃಷಿ- ಎಲ್ಲವೂ ಪ್ರತಿದಿನ ಬದಲಾವಣೆ ಕಾಣುತಿದ್ದು, ನೀವು ಅವುಗಳಿಗೆ ಅಪ್‌ಡೇಟ್ ಆಗಿರದಿದ್ದರೆ, ಗತಕಾಲಕ್ಕೆ ಸೇರಿರುತ್ತೀರಿ ಎಂದು ಎಚ್ಚರಿಸಿದರು.

ನಿಮ್ಮ ಬದುಕಿನಲ್ಲಿ ಪದವಿ ಮುಖ್ಯ ನಿಜ. ಆದರೆ ಅದೇ ಕೊನೆಯಲ್ಲ. ಅದೇ ಗ್ಯಾರಂಟಿಯಲ್ಲ. ಕೇವಲ ಪದವಿ ಗಳಿ ಸಲು, ಆರಾಮದಾಯಕ ಉದ್ಯೋಗ ಪಡೆಯಲು ನೀವು ಈ ಸಂಸ್ಥೆ ಸೇರಿದ್ದಲ್ಲ. ಅದಕ್ಕಿಂತ ಹೆಚ್ಚಿನದನ್ನು ಗಳಿಸುವ ಗುರಿ ನಿಮ್ಮದಾಗಬೇಕು. ರಾಷ್ಟ್ರ ನಿರ್ಮಾಣದಲ್ಲಿ ನಿಮ್ಮ ಕಾಣಿಕೆಯನ್ನು ನೀಡಲು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳುವ, ತಂಡವಾಗಿ ದುಡಿಯುವ, ಅದ್ಭುತವಾದುದನ್ನು ಸಾಧಿಸುವ ಛಲವನ್ನು ನೀವು ಹೊಂದಿರಬೇಕು ಎಂದರು.

ಈ ಸಂದರ್ಭದಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿಯ ವಿವಿಧ ವಿಭಾಗಗಳ 1,148 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಭಾಗ ಗಳ ಸಾಧಕ ವಿದ್ಯಾರ್ಥಿಗಳನ್ನು ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ನಿಟ್ಟೆ ಪರಿಗಣಿತ ವಿವಿಯ ಕುಲಾಧಿಪತಿ ವಿಶಾಲ್ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಘಟಿಕೋತ್ಸವದ ಪ್ರಾರಂಭವನ್ನು ಘೋಷಿಸಿದರು. ವಿವಿ. ಸಹ ಕುಲಾಧಿಪತಿ ಪ್ರೊ. ಡಾ.ಎಂ.ಶಾಂತರಾಮ ಶೆಟ್ಟಿ ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡಿದರು.

ನಿಟ್ಟೆ ವಿವಿಯ ಐಎಸ್‌ಆರ್‌ಸಿಆರ್‌ಎಲ್ ವಿಭಾಗದ ಉಪಾಧ್ಯಕ್ಷ ಡಾ. ಸತೀಶ್‌ಕುಮಾರ್ ಭಂಡಾರಿ, ಬೆಂಗಳೂರು ಕ್ಯಾಂಪಸ್‌ನ ಆಡಳಿತಾಧಿಕಾರಿ ರೋಹಿತ್ ಪೂಂಜ, ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಟ್ರಸ್ಟಿ ವಿರೇನ್ ಹೆಗ್ಡೆ, ಕಾರ್ಯಕಾರಿ ಸಮಿತಿಯ ಸದಸ್ಯ ಪ್ರೊ.ಡಾ. ಒಮೀದ್ ಅನ್ಸಾರಿ, ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಪ್ರೊ. ಸಂದೀಪ್ ಶಾಸ್ತ್ರಿ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ಬಿ. ಶೆಟ್ಟಿ, ಬೆಂಗಳೂರು ಕ್ಯಾಂಪಸ್‌ನ ಪರೀಕ್ಷಾಂಗ ಮುಖ್ಯಸ್ಥ ಡಾ.ಪ್ರಶಾಂತ್ ವಿ. ಹಾಗೂ ವಿವಿಧ ಕಾಲೇಜುಗಳ ಮುಖ್ಯಸ್ಥರು, ವಿಭಾಗಗಳ ನಿರ್ದೇಶಕರು ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.

ನಿಟ್ಟೆ ವಿವಿ ಕುಲಪತಿ ಪ್ರೊ. ಎಂ.ಎಸ್.ಮೂಡಿತ್ತಾಯ ಸ್ವಾಗತಿಸಿದರು. ನಿಟ್ಟೆ ಆಫ್ ಕ್ಯಾಂಪಸ್ ಸೆಂಟರ್‌ನ ಪರೀಕ್ಷಾ ನಿಯಂತ್ರಕ ಡಾ. ಸುಬ್ರಹ್ಮಣ್ಯ ಭಟ್ ಕೆ. ಘಟಿಕೋತ್ಸವದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸಹಪ್ರಾಧ್ಯಾಪಕರಾದ ಡಾ. ಗ್ರೈನಲ್ ಡಿಮೆಲ್ಲೊ ಹಾಗೂ ಡಾ.ಸ್ನೇಹಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.



 


 


 





 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor