ಮಲ್ಪೆ, ನ.7: ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿ ಜಿಲ್ಲಾಡಳಿತ ಮತ್ತು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತುತಿ ಸ್ನಾತಕೋತತಿರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಶನಿವಾರ ತೆಂಕನಿಡಿಯೂರು ಕಾಲೇಜಿ ನಲ್ಲಿ ಹಮ್ಮಿಕೊಳ್ಳಲಾದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿ ಚಾಂಪಿಯನ್ ಪ್ರಶಸ್ತಿ ಗೆದ್ದು ಕೊಂಡಿದೆ.

ಪುರುಷರ 10 ಕಿ.ಮೀ. ವಿಭಾಗದಲ್ಲಿ ಮುಂಬಯಿ ವಿವಿಯ ಸ್ವರಾಜ್ ಸಂದೀಪ್ ಜೋಷಿ ಪ್ರಥಮ, ಮಂಗಳೂರು ವಿವಿಯ ಶೈಲೇಶ್ ಕುಷ್ವಾಹ ದ್ವಿತೀಯ, ಹರ್ಯಾಣ ರೋಹತಿಕ್ ಮಹರ್ಷಿ ದಯಾನಂದ್ ವಿವಿಯ ಅವಕಾಶ್ ತೃತೀಯ ಹಾಗೂ ಸಿಜಿಸಿ ಮೊಹಾಲಿ ವಿವಿಯ ದಿನೇಶ್ ನಾಲ್ಕನೇ ಸ್ಥಾನವನ್ನು ಗಳಿಸಿದ್ದಾರೆ.

ಮಹಿಳೆಯರ 10ಕಿಮೀ ವಿಭಾಗದಲ್ಲಿ ಕೇರಳ ಕೊಟ್ಟಾಯಂ ಮಹಾತ್ಮಾ ಗಾಂಧಿ ವಿವಿಯ ರಾಶಿ ಸಿಎಂ ಪ್ರಥಮ, ಕೇರಳ ಕೊಟ್ಟಾಯಂ ಮಹಾತ್ಮಾ ಗಾಂಧಿ ವಿವಿಯ ಜಿನ್ಸಿ ಜಿ ದ್ವಿತೀಯ, ರಾಜಸ್ಥಾನ ಬಿಕಾನೇರ್ ಮಹಾರಾಜ ಗಂಗಾಸಿಂಗ್ ವಿವಿಯ ವಂದನಾ ಪಟೇಲ್ ತೃತೀಯ ಹಾಗೂ ನಾಲ್ಕನೇ ಸ್ಥಾನವನ್ನು ಹರ್ಯಾಣ ರೋಹತಿಕ್ ಮಹರ್ಷಿ ದಯಾನಂದ್ ವಿವಿಯ ಪೂಜಾ ಪಡೆದುಕೊಂಡರು.

ಪುರುಷರ ವಿಭಾಗದಲ್ಲಿ ರಾಜಸ್ಥಾನ ವಿವಿ ಜೈಪುರ ಪ್ರಥಮ, ಕ್ಯಾಲಿಕಟ್ ವಿವಿ ದ್ವಿತೀಯ ಹಾಗೂ ಮಂಗಳೂರು ವಿವಿ ತೃತೀಯ, ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿವಿ ಪ್ರಥಮ, ಹರ್ಯಾಣ ರೋಹತಿಕ್ ಮಹರ್ಷಿ ದಯಾನಂದ್ ವಿವಿ ದ್ವಿತೀಯ ಹಾಗೂ ಕೇರಳ ಕೊಟ್ಟಾಯಂ ಮಹಾತ್ಮಾಗಾಂಧಿ ವಿವಿ ತೃತೀಯ ಚಾಂಪಿಯನ್ ಶಿಪ್ ಪಡೆದು ಕೊಂಡಿದೆ. ಪಂದ್ಯಾಕೂಟದಲ್ಲಿ ಒಟ್ಟು 850 ಮಂದಿ ಪುರುಷ ಕ್ರೀಡಾಪಟುಗಳು, 650 ಮಹಿಳಾ ಕ್ರೀಡಾಪಟುಗಳು ಹಾಗೂ 100 ಅಧಿಕಾರಿಗಳು ಭಾಗವಹಿಸಿದ್ದರು.

ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಎ.ಐ.ಯು. ನವದೆಹಲಿಯ ವೀಕ್ಷಕ ಡಾ.ಜಯಪ್ರಕಾಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಒಂದು ಸರಕಾರಿ ಕಾಲೇಜು ಇಂಥಹ ರಾಷ್ಟ್ರಮಟ್ಟದ ಪಂದ್ಯಾಕೂಟವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವುದು ಶ್ಲಾಘನೀಯ. ಶೂನ್ಯ ಪ್ರತಿಭಟನೆ, ಶೂನ್ಯ ಗಾಯಗಳು ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೆಲವೇ ಕೆಲವು ರಾಷ್ಟ್ರಮಟ್ಟದ ಪಂದ್ಯಾಕೂಟದಲ್ಲಿ ಇದು ಒಂದಾಗಿದೆ ಎಂದರು.

ಈ ಸಂದರ್ಭ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಪ್ರಾಂಶುಪಾಲ ಪ್ರೊ.ನಿತ್ಯಾನಂದ ವಿ.ಗಾಂವ್ಕರ್, ಸಿಡಿಸಿ ಸದಸ್ಯ ಪ್ರವೀಣ್ ಕುಮಾರ್, ಧನಂಜಯ ಕುಂದರ್ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.

ಕ್ರಾಸ್ ಕಂಟ್ರಿಗೆ ಚಾಲನೆ: ಪುರುಷರ ಓಟಕ್ಕೆ ಶಾಸಕ ಯಶ್‌ಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಎಚ್.ಎನ್.ಗೋಪಾಲಕೃಷ್ಣ ಚಾಲನೆ ನೀಡಿದರು. ಮಹಿಳೆಯರ ಓಟಕ್ಕೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಂಗಳೂರು ವಿವಿ ಕುಲಸಚಿವ ಸಂತೋಷ್ ಬಿ.ಜಗಲಸಾರ್ ಕೆ.ಎ.ಎಸ್., ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಿಭಾಗದ ಜಂಟಿ ನಿರ್ದೇಶಕಿ ಡಾ.ಕವಿತಾ ಕೆ.ಆರ್., ಉದ್ಯಮಿ ಆನಂದ ಪಿ. ಸುವರ್ಣ, ಪ್ರಖ್ಯಾತ್ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷ ನಾಗರಾಜ್ ಸಂಕೊಳ್ಳಿ, ಲಯನ್ಸ್ ಕ್ಲಬ್ ಅಧ್ಯಕ್ಷೆ ಚಂದ್ರಿಕಾ ಜೆ.ಪಿ., ಉಡುಪಿ ಜಿಲ್ಲಾ ಆಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor