ಕುಂದಾಪುರ, ನ.7: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಮುಖ್ಯ ವಾಗಿ ಮಕ್ಕಳನ್ನು ಆನ್‌ಲೈನ್ ಗೇಮ್, ಚಿತ್ರ, ವಿಡಿಯೋಗಳನ್ನು ಕಳುಹಿಸಿ, ಬೆದರಿಸುವ ಕೃತ್ಯಗಳು ಆಗುತ್ತಿದ್ದು, ಇದು ಕೂಡ ಪೋಕ್ಸೋ ಕಾಯ್ದೆಯಡಿ ಗಂಭೀರವಾದ ಪ್ರಕರಣವಾಗಿದೆ. ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಕುಂದಾಪುರದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ, ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಮಂಜುಳಾ ಬಿ. ಹೇಳಿದ್ದಾರೆ.

ಉಡುಪಿ ಜಿಲ್ಲಾ, ತಾಲೂಕು ಕಾನೂನು ಸೇವಾ ಪ್ರಾಧಿಕಾರ ಮತ್ತು ಸೇವಾ ಸಮಿತಿ, ಕುಂದಾಪುರ ವಕೀಲರ ಸಂಘ, ಕುಂದಾಪುರ ಅಭಿಯೋಗ ಇಲಾಖೆ ಮತ್ತು ಸೈಂಟ್ ಮೇರಿಸ್ ಪ.ಪೂ. ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುರಕ್ಷಿತ ಬಾಲ್ಯ ಅಭಿಯಾನ ಉದ್ಘಾಟಿಸಿ, ಅನರು ಮಾತನಾಡುತಿದ್ದರು.

ಮಕ್ಕಳು ಪೋಕ್ಸೋ ಕಾಯ್ದೆಯಡಿ ದೂರು ನೀಡುವ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕಾಗಿದೆ. ಸಶಕ್ತ ದೇಶ ನಿರ್ಮಾಣದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯೂ ಪ್ರಮುಖವಾಗಿದೆ. ಅವರಿಗೆ ಗೌರವಯುತ ವಾತಾವರಣ ಕಲ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಮಕ್ಕಳಿಗೆ ಯಾರಾದರೂ ದೌರ್ಜನ್ಯ, ಕಿರುಕುಳ, ಅಸಭ್ಯ ಮಾತು, ಶಬ್ದ, ದುವರ್ತನೆ, ಆನ್‌ಲೈನ್ ಮೂಲಕ ಬೆದರಿಕೆ, ಕಿರುಕುಳ ನೀಡಿದರೆ ಆ ಬಗ್ಗೆ ಸಹಾಯವಾಣಿ, ಪೊಲೀಸ್ ಠಾಣೆ, ತಾಲೂಕು ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಬಹುದು. ಈ ಬಗ್ಗೆ ಭಯ ಬೇಡ. ಮಾಹಿತಿ ನೀಡಿದವರ ಹೆಸರು, ವಿಳಾಸ ಎಲ್ಲವನ್ನೂ ಗೌಪ್ಯವಾಗಿಡಲಾಗುವುದು ಎಂದರು.

ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ. ಮಾತನಾಡಿ, ಮಾನಸಿಕ, ದೈಹಿಕ ಹಿಂಸೆ ನೀಡು ವವರ ವಿರುದ್ಧ ಮಕ್ಕಳು ನಿಶ್ಚಿಂತೆಯಿಂದ ದೂರು ನೀಡಬಹುದು. ಮಕ್ಕಳಿಗೆ ಸುರಕ್ಷಿತವಾದ ಬಾಲ್ಯವನ್ನು ಕಲ್ಪಿಸುವ ಜತೆಗೆ, ಅವರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಎಲ್ಲೆಡೆ ಆಯೋಜಿಸಲಾ ಗುತ್ತಿದೆ. ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಸರಕಾರ, ಪೋಷಕರು, ಶಿಕ್ಷಕರ ಹೊಣೆಗಾರಿಕೆ ಯಾಗಿದೆ ಎಂದು ತಿಳಿಸಿದರು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ಜೆ. ರಾವ್ ಮಾತನಾಡಿ, ಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಇದಾಗಿದ್ದು, ಸುರಕ್ಷೆ, ಹಕ್ಕು, ಕಾನೂನು ನೆರವಿನ ಮಾಹಿತಿಯನ್ನು, ಮಾದಕ ದ್ರವ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಈ ಮೂಲಕ ಆಗುತ್ತಿದೆ ಎಂದು ಹೇಳಿದರು.

ವಕೀಲರಾದ ರಿತೇಶ್ ಬಿ., ರಮೀಜಾ ಸಂಪನ್ಮೂಲ ವ್ಯಕ್ತಿಗಳಾಗಿ ಪೋಕ್ಸೋ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸೈಂಟ್ ಮೇರಿಸ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಫಾ.ರೋಲ್ವಿನ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪೊಲೀಸ್ ಉಪನಿರೀಕ್ಷಕ ಮೋಹನ್ ಕುಮಾರ್, ಸಿಬಂದಿ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

ಉಪನ್ಯಾಸಕರಾದ ಶರ್ಮಿಳಾ ಮಿನೇಜಸ್ ಸ್ವಾಗತಿಸಿ, ಗೌರಿ ವಂದಿಸಿದರು. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor