ಉಡುಪಿ, ನ.7: ಪೆರ್ಡೂರು ಪ್ರದೀಪ್ ಪೂಜಾರಿ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವ್ಯವಸ್ಥೆಯ ಮೇಲೆ ವಿಶ್ವಾಸ ಹೊರಟು ಹೋಗಿರುವುದರಿಂದ ಇಡೀ ಪ್ರಕರಣ ಹಾಗೂ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು ಎಂದು ಮೃತರ ಸಹೋದರ ದಿಲೀಪ್ ಪೂಜಾರಿ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ವಶದಲ್ಲಿದ್ದ ಗಾಯಾಳು ಪ್ರದೀಪ್ ಪೂಜಾರಿಯ ಭದ್ರತೆ ಮತ್ತು ಆತನ ದೂರನ್ನು ಸ್ವೀಕರಿಸದಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ಇದೊಂದು ಪೊಲೀಸ್ ಕಸ್ಟಡಿ ಸಾವು ಆಗಿದೆ. ಈ ಪ್ರಕರಣದಲ್ಲಿ ಕೆಳ ಹಂತದ ಸಿಬ್ಬಂದಿಗಳನ್ನು ಅಮಾನತು ಗೊಳಿಸಿ, ಅದೇ ಅಪರಾಧ ಎಸಗಿ ರುವ ಹಿರಿಯಡ್ಕ ಎಸ್ಸೈಯನ್ನು ಕೇವಲ ಕಡ್ಡಾಯ ರಜೆಗೆ ಕಳುಹಿಸಿರುವುದು ಇಲಾಖೆಯ ಪಕ್ಷಪಾತ ಹಾಗೂ ತಾರತಮ್ಯ ನೀತಿಯಾಗಿದೆ ಎಂದರು.

ಆದುದರಿಂದ ಗಂಭೀರ ಕರ್ತವ್ಯ ಲೋಪ ಎಸಗಿರುವ ಎಸ್ಸೈ ಪುನೀತ್ ಅವರನ್ನು ಕೂಡ ಅಮಾನತುಗೊಳಿಸಬೇಕು. ಪ್ರದೀಪ್ ಪೂಜಾರಿ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು. ಸತತ ಕಿರುಕುಳಕ್ಕೆ ಒಳಗಾದ ಪ್ರದೀಪ್ ಕುಟುಂಬಕ್ಕೆ ಸೂಕ್ತ ಭದ್ರತೆ ಮತ್ತು ಕಾನೂನು ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಅನ್ಯಾಯ, ಪೊಲೀಸ್ ಇಲಾಖೆಯ ದೌರ್ಜನ್ಯ ಮತ್ತು ಆಡಳಿತಾತ್ಮಕ ವೈಫಲ್ಯವನ್ನು ಖಂಡಿಸಿ ಪೆರ್ಡೂರು ನಾಗರಿಕ ಹಿತರಕ್ಷಣಾ ಸಮಿತಿಯ ವತಿಯಿಂದ ನ.11ರಂದು ಉಡುಪಿಯಲ್ಲಿ ಜನಾಗ್ರಹ ಸಭೆಯನ್ನು ಹಮ್ಮಿಕೊ ಳ್ಳಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಜಿಯಾನಂದ ಹೆಗ್ಡೆ, ವಕೀಲೆ ಸಹನಾ ಕುಂದರ್ ಸೂಡ, ದೇವು ಪೂಜಾರಿ, ಸಚಿನ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor