ಕುಂದಾಪುರ, ನ.9: ಬಹುಬೇಡಿಕೆಯಾಗಿದ್ದ ಪುರಸಭೆ ವ್ಯಾಪ್ತಿಯ ಫೆರ್ರಿ ರೋಡ್‌ನಿಂದ ಸಂಗಮ್ ವರೆಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್‌ನಲ್ಲಿ ದಾರಿದೀಪಗಳು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಳಗಿದ್ದು ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.

ನಗರದ ಎಲ್ಲ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ, ಸಂಚಾರ ದಟ್ಟಣೆ ತಗ್ಗಿಸುವ 2 ದಶಕದ ಬೇಡಿಕೆಯಾಗಿರುವ ಈ ರಿಂಗ್ ರೋಡ್ ಇದಾಗಿದೆ. ಕಾಮಗಾರಿ ಮುಗಿದು, ವಿದ್ಯುತ್ ಕಂಬಗಳನ್ನು ಅಳವಡಿಸಿದ್ದರೂ, ಅದಕ್ಕೆ ಮೆಸ್ಕಾಂನಿಂದ ಸಂಪರ್ಕ ಕಲ್ಪಿಸಿರಲಿಲ್ಲ. ಈಗ ಶಾಸಕ ಕಿರಣ್ ಕುಮಾರ್ ಕೊಡ್ಗಿ ಪ್ರಯತ್ನ, ಮೆಸ್ಕಾಂ ಸಹಕಾರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಿಂಗ್ ರೋಡ್ ಬೆಳಗಿದೆ.

2006-07ರಲ್ಲಿ ಆಗಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ದೂರದೃಷ್ಟಿತ್ವದಲ್ಲಿ ಯೋಜನೆ ಆರಂಭ ಗೊಂಡಿತ್ತು. 19.8 ಕೋ. ರೂ. ವೆಚ್ಚದಲ್ಲಿ ಕಾಮಗಾರಿಯಾಗಿದೆ. 2023ರಲ್ಲಿ ಹಾಲಿ ಶಾಸಕರ ಮನವಿಯಂತೆ ಈ ಅನುದಾನಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದರು.

ರಿಂಗ್ ರೋಡ್ ನಿಂದ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ನಗರದೊಳಗೆ ಪ್ರವೇಶ ಪಡೆಯದೆ ಕೋಡಿ ಮೊದಲಾದ ಭಾಗಗಳಿಗೆ, ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಹೆದ್ದಾರಿಯಿಂದ ರಿಂಗ್ ರೋಡ್ ಮೂಲಕ ಹೋಗಲು ಸಾಧ್ಯವಿದೆ. ಆದ್ದರಿಂದ ರಿಂಗ್ ರೋಡ್ ನಿರ್ಮಾಣದ ಅವಶ್ಯವನ್ನು ಅಂದಿನ ಶಾಸಕರು ಇಚ್ಚಾಶಕ್ತಿ ತೋರಿದ್ದರು. ಆದರೆ ನಾನಾ ಕಾರಣಗಳಿಂದ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಮಂಜೂರಾತಿ ವಿಳಂಬವಾಗುತ್ತಿತ್ತು.

ಈ ರಸ್ತೆಯು ಕುಂದಾಪುರ ಫೆರ್ರಿ ರಸ್ತೆಯಿಂದ ಕುಂದಾಪುರ ಸಂಗಮ್ ತನಕ ಇದ್ದು, ರಸ್ತೆಯ ಉದ್ದಕ್ಕೂ 4 ತಿರುವಿನಲ್ಲಿ ಹಂಪ್ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ರೋಡುಗಳು ವಿಶಾಲವಾಗಿದ್ದರಿಂದ ವಾಹನಗಳ ವೇಗಗಳು ಕೂಡ ಜಾಸ್ತಿಯಾಗಿದೆ. ಪಾದಚಾರಿಗಳಿಗೆ ನಡೆಯಲು ದಾರಿ, ನದಿಗೆ ತಡೆಗೋಡೆ, ಚರಂಡಿ, ವಿದ್ಯುತ್ ದೀಪಗಳ ಬೆಳಕಿನ ವ್ಯವಸ್ಥೆ ಆಗಿ ರಿಂಗ್ ರೋಡ್ ಅತ್ಯಾಕರ್ಷಕವಾಗಿ ಕಾಣುತ್ತಿದೆ. ಪಾದಚಾರಿ ಪಥವೂ ಆಗಿದೆ. ಅಪಾಯಕಾರಿಯಾಗಿ ವಾಹನಗಳು ಓಡಾಡದಂತೆ ಇಲ್ಲಿ ವೇಗ ತಡೆ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬೆಳಕಿನ ವ್ಯವಸ್ಥೆಗೆ ಚಾಲನೆ: ರಿಂಗ್ ರೋಡ್‌ನ ಮುಂದುವರಿದ ಭಾಗವಾಗಿ ಅಳವಡಿಸಲಾದ ದಾರಿದೀಪಗಳನ್ನು ಪುರಸಭೆ ನಿಕಟಪೂರ್ವ ಅಧ್ಯಕ್ಷ ಮೋಹನದಾಸ್ ಶೆಣೈ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶೇರ್ಖ ಪೂಜಾರಿ, ಮಾಜಿ ಸದಸ್ಯರಾದ ಚಂದ್ರಶೇಖರ್ ಖಾರ್ವಿ, ಸಂದೀಪ್ ಖಾರ್ವಿ ಹಾಗೂ ಅಬ್ಬು ಮೊಹಮ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor