ಉಡುಪಿ, ನ.9: ನಗರದ ಗುಂಡಿಬೈಲಿನ ಪೆಟ್ರೋಲ್ ಪಂಪ್‌ನ ವ್ಯವಸ್ಥಾಪಕರಿಗೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನ.7ರಂದು ರಾತ್ರಿ ವೇಳೆ ನಡೆದಿದೆ.

ಹಲ್ಲೆಗೆ ಒಳಗಾಗಿರುವ ಪೆಟ್ರೋಲ್ ಬಂಕ್ ಮಾಲಕ ಆಶೀಶ್ ಶೆಟ್ಟಿ(44) ಎಂಬವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೈದ ಆರೋಪಿಗಳನ್ನು ಪಲಿಮಾರಿನ ಪುನೀತ್, ರೋಷನ್, ಫೈಜಲ್ ಮತ್ತು ಇಬ್ಬರು ವ್ಯಕ್ತಿಗಳು ಎಂದು ಗುರುತಿಸಲಾಗಿದೆ.

ಪೆಟ್ರೋಲ್ ಪಂಪ್‌ನ ಹಿಂಭಾಗದಲ್ಲಿ ಮದ್ಯಪಾನ ಮಾಡುತ್ತಿದ್ದ ವಿಶಾಲ್ ಬಸ್‌ನ ಆಕಾಶ್ ಎಂಬಾತನಿಗೆ ಇಲ್ಲಿ ಮದ್ಯ ಪಾನ ಮಾಡುವುದು ಸರಿಯಲ್ಲ ಎಂದು ಆಶೀಶ್ ಶೆಟ್ಟಿ ಹೇಳಿದ್ದರು. ಈ ವಿಚಾರದಲ್ಲಿ ಇವರ ಮಧ್ಯೆ ಜಗಳ ಆಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿ ರಾತ್ರಿ ವೇಳೆ ಓರ್ವ ವ್ಯಕ್ತಿಯು ಲಾರಿಯಲ್ಲಿ ಹಾಗೂ ಇತರ ನಾಲ್ವರು ವ್ಯಕ್ತಿಗಳು ಕಾರಿನಲ್ಲಿ ಪೆಟ್ರೋಲ್ ಪಂಪ್‌ಗೆ ಬಂದರೆನ್ನಲಾಗಿದೆ.

ಅಲ್ಲಿ ಆರೋಪಿಗಳೆಲ್ಲರು ಸೇರಿ ಆಶೀಶ್ ಶೆಟ್ಟಿ ಅವರಿಗೆ ಕೈಗಳಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದಿದರು. ಈ ವೇಳೆ ಪುನೀತ್ ತನ್ನ ಕೈಯಲ್ಲಿದ್ದ ಕಡ ದಿಂದ ಆಶೀಶ್ ಶೆಟ್ಟಿ ತಲೆಗೆ ಹೊಡೆದಿದ್ದಾನೆ ಎಂದು ದೂರಲಾಗಿದೆ. ಅಲ್ಲದೆ, ಆರೋಪಿಗಳು ಲಾರಿಗೆ 3,000ರೂ. ಮೊತ್ತದ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor