ಉಡುಪಿ, ನ.9: ಯಕ್ಷಗಾನ ಇಂದು ಪ್ರಬುದ್ಧ ಕಲೆಯಾಗಿ ಬೆಳೆದಿದ್ದು, ರಾಜ್ಯ ಕಲೆಯಾಗಿ ಮಾನ್ಯತೆ ಪಡೆಯುವ ಎಲ್ಲಾ ಅರ್ಹತೆಯನ್ನು ಪಡೆದಿದೆ. ಈ ಕಲೆ ಸಮೃದ್ಧಿಯಿಂದ ಬೆಳಗಬೇಕೆಂಬ ಉದ್ಧಾಶದಿಂದ ರಾಜ್ಯ ಕಲೆಯ ಸ್ಥಾನ ಮಾನ ಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಧರ್ಮಸ್ಥಳದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ಕನ್ಯಾಡಿ ಪೀಠಾಧಿಪತಿ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಯೋಜಿಸಿದ್ದ ‘ಯಕ್ಷ ಸಂಭ್ರಮ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿಅವರು ಮಾತನಾಡುತಿದ್ದರು.

ಯಕ್ಷಗಾನ ಇಂದು ಕೇವಲ ಪ್ರದರ್ಶನ ಕಲೆಯಾಗಿ ಉಳಿದಿಲ್ಲ. ಬದಲಿಗೆ ತನಗೆ ಸಮರ್ಪಿಸಿಕೊಂಡ ಕಲಾವಿದರು, ಕಲಾ ಸಂಘಟಕರು, ಯಕ್ಷ ಪ್ರೇಮಿಗಳು ಸೇರಿದಂತೆ ಪ್ರತಿಯೊಬ್ಬರ ಬದುಕಿಗೂ ಆಸರೆಯಾಗಿದೆ. ಈ ಕಲೆ ಸಮೃದ್ಧಿಯಿಂದ ಬೆಳಗಬೇಕು ಎಂಬ ಉದ್ದೇಶದಿಂದ ರಾಜ್ಯ ಕಲೆಯ ಸ್ಥಾನ ಮಾನಕ್ಕಾಗಿ ಬೇಡಿಕಿ ಸಲ್ಲಿಸಿದ್ದೇವೆ. ರಾಜ್ಯ ಮುಖ್ಯಮಂತ್ರಿಗಳ ಗಮನವನ್ನು ಈ ಬಗ್ಗೆ ಸೆಳೆದಿದ್ದು, ಕಲಾಭಿಮಾನಿಗಳು ಇದಕ್ಕೆ ಧ್ವನಿಗೂಡಿಸಬೇಕು ಎಂದರು.

ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಅಂತರಾಳದ ಸಂತೋಷವನ್ನು ಪಡೆಯಲು ನಾವು ಧರ್ಮವನ್ನು ಅನುಸರಿಸಬೇಕು. ಅಂತಹ ಧರ್ಮವನ್ನು ಪಾಲನೆ ಮಾಡಲು ನಮಗೆ ನೆರವಾಗುವುದು ಯಕ್ಷಗಾನ ಎಂಬ ಕಲೆ. ಧರ್ಮವನ್ನು ಹೇಗೆ ಅನುಸರಿಸಬೇಕು ಎಂಬುದಕ್ಕೆ ಯಕ್ಷಗಾನದ ದಿಗ್ಗಜರು ಪ್ರಸಂಗದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.

ಪಕ್ಷ, ಜಾತಿ ಭೇದ ಮರೆತು ನಾವೆಲ್ಲಾ ಒಂದಾಗಬೇಕು. ಇದಕ್ಕೆ ನಾವು ಯುವ ಪೀಳಿಗೆಗೆ ಸಂಸ್ಕಾರ ಕೊಡಬೇಕು. ಇದಕ್ಕೆ ಪೂರಕವಾಗಿ ಯಕ್ಷಗಾನ ಪ್ರಸಂಗಗಳು ಹುಟ್ಟಿಬರಬೇಕೇ ಹೊರತು ಕೇವಲ ಮನೋರಂಜನೆಗಾಗಿ ಅಲ್ಲ ಎಂಬುದನ್ನು ನಾವು ಅರಿಯಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸುವರ್ಣ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ, ಗುರುವಾಯನಕೆರೆ ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಉದ್ಯಮಿ ಪ್ರವೀಣ್ ಫೆರ್ನಾಂಡಿಸ್, ಬೆಳ್ತಂಗಡಿ ನವಜ್ಞಾನ ಸುಧಾ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ನಾಗೇಶ್ ಗೌಡ, ಉಡುಪಿಯ ಖ್ಯಾತ ಸಂಗೀತ ವಿದ್ವಾನ್ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ ಎಚ್. ಗೇರುಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಅಕಾಡೆಮಿ ಸದಸ್ಯ ದಯಾನಂದ ಪಿ.ಬೆಳಾಲು ಪ್ರಾಸ್ತಾವಿಕ ಮಾತು ಗಳೊಂದಿಗೆ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಲೆ ಹಾಗೂ ಯಕ್ಷಗಾನ ಬಯಲಾಟ ನಡೆಯಿತು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor