ಲೆಕ್ಕಪರಿಶೋಧಕರ ರಾಷ್ಟ್ರೀಯ ಸಮ್ಮೇಳನ ‘ಸಮುದ್ಯತಿ’ ಉದ್ಘಾಟನೆ
ಉಡುಪಿ, ನ.13: ಲೆಕ್ಕಪರಿಶೋಧಕರ ಬಳಿ ಇರುವ ಮೂರು ಅತ್ಯಂತ ಶಕ್ತಿಶಾಲಿ ಅಸ್ತ್ರಗಳೆಂದರೆ ಮೊದಲನೆ ಯದಾಗಿ ಯುಡಿಐಎನ್(ವಿಶಿಷ್ಟ ದಾಖಲೆ ಗುರುತಿನ ಸಂಖ್ಯೆ), ಎರಡನೆಯದಾಗಿ ’ಪೀರ್ ರಿವ್ಯೆ’ ಎಂಬ ಪರಿಕಲ್ಪನೆ ಮತ್ತು ಮೂರನೆಯ ಮತ್ತು ಅತ್ಯಂತ ಮಹತ್ವದ ಶಕ್ತಿಯೆಂದರೆ ಸಿಪಿಇ(ನಿರಂತರ ವೃತ್ತಿಪರ ಶಿಕ್ಷಣ) ವ್ಯವಸ್ಥೆಯಾಗಿದೆ. ಇದು ನಮ್ಮೆಲ್ಲರ ಶಕ್ತಿ ಪಿಜಿಎಫ್ಎಂಸಿಯ ಉಪಾಧ್ಯಕ್ಷ ಸಿಎ ಅರ್ಪಿತ್ ಕಾಬ್ರಾ ಹೇಳಿದ್ದಾರೆ.
ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಆಶ್ರಯದಲ್ಲಿ ಸಾರ್ವಜನಿಕ ಮತ್ತು ಸರಕಾರಿ ಹಣಕಾಸು ನಿರ್ವಹಣಾ ಸಮಿತಿ ವತಿಯಿಂದ ಐಸಿಎಐ ಉಡುಪಿ ಶಾಖೆ (ಎಸ್ಐಆರ್ಸಿ) ಆತಿಥ್ಯದಲ್ಲಿ ಉಡುಪಿ ಪುರಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ‘ಸಮುದ್ಯತಿ’ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆಡಿಟ್ ಮುಗಿದ ನಂತರ ಡಾಕ್ಯುಮೆಂಟೇಶನ್ ಮಾಡಲು ಅನೇಕರಿಗೆ ಭಯವಾಗುತ್ತದೆ. ಯಾಕೆಂದರೆ ಏನಾದರೂ ತಪ್ಪು ಸಿಕ್ಕಿಬಿದ್ದರೆ ಎಂಬ ಭಯ. ಡಾಕ್ಯುಮೆಂಟೇಶನ್ ಮಾಡಿದಾಗ ಮಾತ್ರ ಆಡಿಟ್ ಅಥವಾ ಬ್ಯಾಲೆನ್ಸ್ ಶೀಟ್ನಲ್ಲಿ ಏನಾದರೂ ತಪ್ಪಾಗಿದೆಯೇ ಎಂಬುದು ತಿಳಿಯಲು ಸಾಧ್ಯ. ಆದ್ದರಿಂದ ಡಾಕ್ಯುಮೆಂಟೇಶನ್ಗೆ ಮಹತ್ವ ನೀಡುವ ಅಗತ್ಯ ಇದೆ ಎಂದು ಅವರು ತಿಳಿಸಿದರು.
ಎದುರಾಗುವ ಪ್ರತಿಯೊಂದು ಬಿಕ್ಕಟ್ಟು ಕೂಡ ಒಂದು ಹೊಸ ಅವಕಾಶವನ್ನು ತರುತ್ತದೆ. ಲೆಕ್ಕಪರಿಶೋಧಕರು ಇಂತಹ ಅವಕಾಶಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು. ಆದ್ದರಿಂದ ಈ ಸಮ್ಮೇಳನವು ಅತ್ಯಂತ ಸಮಯೋಚಿತವಾಗಿದೆ ಎಂದರು.
ಇಂದು ನಾವು ಕೇವಲ ವಿಶ್ವದ ಅತಿದೊಡ್ಡ ಅಕೌಂಟಿಂಗ್ ಸಂಸ್ಥೆಯಾಗಿಲ್ಲ, ಬದಲಾಗಿ ವಿಶ್ವದ ಅತಿದೊಡ್ಡ ಅನುಷ್ಠಾನ ಪಾಲುದಾರಾಗಿದ್ದೇವೆ. ದೇಶದ ವಿಷಯಕ್ಕೆ ಬಂದಾಗ ನಮ್ಮ ಸಂಸ್ಥೆಯು ಅತ್ಯಂತ ದೃಢವಾಗಿ ನಿಲ್ಲುತ್ತದೆ. ಇದಕ್ಕೆ ಕಾರಣ ನಮ್ಮಲ್ಲಿರುವ ಒಗ್ಗಟ್ಟು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಾಲ್ ಮಾತನಾಡಿದರು. ಸಿಎ ಪ್ರಮೋದ್ ಹೆಗ್ಡೆ, ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷ ಸಿಎ ರಾಘವೇಂದ್ರ ಮೊಗೇರಾಯ, ಉಪಾಧ್ಯಕ್ಷ ಸಿಎ ಅಶ್ವಥ್ ಜೆ.ಶೆಟ್ಟಿ, ಕಾರ್ಯದರ್ಶಿ ಸಿಎ ಕೆ.ಲಕ್ಷ್ಮೀಶ ರಾವ್, ಖಜಾಂಚಿ ಸಿಎ ಅರ್ಚನಾ ಆರ್.ಮಯ್ಯ, ಸಿಕಾಸಾ ಅಧ್ಯಕ್ಷ ಸಿಎ ಸೋನಿತ್ ಎಸ್.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.