ಉಡುಪಿ, ನ.24: ಉಡುಪಿ ಜಿಲ್ಲೆಯಾದ್ಯಂತ ಒಟ್ಟು 9 ನೂತನ ಸೇತುವೆ ಗಳು ಮಂಜೂರಾಗಿ ಅನುದಾನ ಬಿಡುಗಡೆ ಗೊಂಡು ಟೆಂಡರ್ ಆಗಿದೆ. ಶೀಘ್ರದಲ್ಲಿಯೇ ಇದರ ಕಾಮಗಾರಿಗಳು ನಡೆಯಲಿವೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ತಲಾ 25ಕೋಟಿ ರೂ. ಅನುದಾನವನ್ನು ಲೋಕೋಪಯೋಗಿ ಇಲಾಖೆಯಿಂದ ನೀಡಲಾಗಿದೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ 5ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಾಪು ವಿಧಾನ ಸಭಾ ಕ್ಷೇತ್ರದ ಬಜಗೋಳಿ-ತೆಂಕಬೆಟ್ಟು ರಾಜ್ಯ ಹೆದ್ದಾರಿಯಲ್ಲಿರುವ ಪೆರ್ಡೂರು- ಬೈರಂಪಳ್ಳಿ ಸಂಪರ್ಕ ಕಲ್ಪಿಸುವ ಅಣ್ಣಾಲು ಸೇತುವೆಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಗುಣಮಟ್ಟ ಕಾಯ್ದುಕೊಂಡು ಅತೀವೇಗವಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರವಾಸೋದ್ಯಮ ನೀತಿಯಿಂದ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಸೃಷ್ಠಿಯಾಗುತ್ತದೆ ಮತ್ತು ಬಂಡವಾಳ ಹೂಡಿಕೆ ಆಗುತ್ತದೆ. ಈ ಮೂಲಕ ಜಿಲ್ಲೆಯ ಆರ್ಥಿಕತೆಯಲ್ಲಿ ಅಮೂಲಾಗ್ರ ಬದಲಾವಣೆ ಸಾಧ್ಯವಾಗುತ್ತದೆ ಎಂದರು.

ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ವಿಶೇಷ ಗಮನ ಹರಿಸಿ ಅನುದಾನ ಒದಗಿಸಿದ್ದಾರೆ. ಕಾಪು ಕ್ಷೇತ್ರಕ್ಕೆ 40ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು. ಶಿಥಿಲಾವಸ್ಥೆಯಲ್ಲಿದ್ದ 70ವರ್ಷಗಳ ಹಳೆಯ ಅಣ್ಣಾಲು ಸೇತುವೆ, ಮಳೆಗಾಲದಲ್ಲಿ ನೆರೆ ಬಂದರೆ ಸಂಪೂರ್ಣ ಮುಳುಗುತ್ತದೆ. ಇದನ್ನು ಮನಗಂಡ ಲೋಕೋಪಯೋಗಿ ಸಚಿವರು ಕಾಪು ಕ್ಷೇತ್ರಕ್ಕೆ ಎರಡು ಸೇತುವೆಗಳನ್ನು ಮಂಜೂರು ಮಾಡಿದ್ದಾರೆ. ಇನ್ನೊಂದು ಹಿರಿಯಡ್ಕ ಸಮೀಪ ಸೇತುವೆ ನಿರ್ಮಾಣವಾಗಲಿದೆ ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಎಸ್ಪಿ ಹರಿರಾಂ ಶಂಕರ್, ಜಿಪಂ ಸಿಇಓ ಪ್ರತೀಕ್ ಬಾಯಾಲ್, ಅಪರ ಜಿಲ್ಲಾಧಿಕಾರಿ ಹಬೀದ್ ಗದ್ಯಾಳ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor