ಮೇ 10ರಿಂದ ಅನಿಲ ಸಿಲಿಂಡರ್ ನಿಯಮದಲ್ಲಿ ಬದಲಾವಣೆ
ಉಡುಪಿ: ಮೇ 10ರಿಂದ ದೇಶಾದ್ಯಂತ ಗೃಹ ಬಳಕೆಯ ಅನಿಲ ಸಿಲಿಂಡರ್ ಉಪಯೋಗಿಸುವವರಿಗೆ ಹೊಸ ನಿಯಮಗಳು ಜಾರಿಗೊಳ್ಳಲಿವೆ. ಅನಿಲ ಬಳಕೆಯಲ್ಲಿ ಸುರಕ್ಷತೆ, ಪಾರದರ್ಶಕತೆಯನ್ನು ಹೆಚ್ಚಿಸು ವಲ್ಲಿ ಹೊಸ ನಿಯಮಗಳು ಹೆಚ್ಚು ಉಪಯುಕ್ತವಾಗಲಿದ್ದು ಹಾಗೂ ಸ್ವಚ್ಛ ಇಂಧನ ಬಳಸುವತ್ತ ಜನರನ್ನು ಇದು ಪ್ರೋತ್ಸಾಹಿಸುವ ನಿರೀಕ್ಷೆ ಇದೆ.
ನಿಯಮಗಳ ಬದಲಾವಣೆಯಿಂದ ವೈಯಕ್ತಿಕ ಅನಿಲ ಬಳಕೆದಾರರು ಹಾಗೂ ಅನಿಲ ವಿತರಣ ನೆಟ್‌ವರ್ಕ್ ಇಬ್ಬರಿಗೂ ಅನುಕೂಲವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗ ತರಲಾಗುತ್ತಿರುವ ಬದಲಾವಣೆಗಳು ಡಿಜಿಟಲ್ ಟ್ರ್ಯಾಕಿಂಗ್, ಸಬ್ಸಿಡಿ ಸುಧಾರಣೆ ಹಾಗೂ ಸುರಕ್ಷತೆಯ ಉನ್ನತೀಕರಣದಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ.
ಮೇ 10ರಿಂದ ಆಗಲಿರುವ ನಿಯಮದ ಬದಲಾವಣೆಗಳಲ್ಲಿ ಪ್ರಮುಖವಾದುದು ಅನಿಲ ಸಿಲಿಂಡರ್‌ಗಳ ಸುಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯ ಅಳವಡಿಕೆ. ನೀವು ಬಳಸುವ ಪ್ರತಿಯೊಂದು ಸಿಲಿಂಡರ್‌ಗಳೂ ಇನ್ನು ಮುಂದೆ ಬಾರ್‌ಕೋಡ್/ಆರ್‌ಎಫ್‌ಐಡಿ ಅಥವಾ ಕ್ಯೂಆರ್ ಕೋಡ್‌ಗಳನ್ನು ಹೊಂದಿರುತ್ತದೆ. ಇದರಿಂದಾಗಿ ಅನಿಲ ಏಜೆನ್ಸಿಗಳಿಗೆ ಹಾಗೂ ಬಳಕೆದಾರರಿಗೆ ಅನಿಲ ಬಳಕೆ, ರಿಫಿಲ್ ಇತಿಹಾಸ ಹಾಗೂ ಸುರಕ್ಷತೆಯ ಸದ್ಯದ ಸ್ಥಿತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ.
ಈ ಸುಧಾರಣೆಯ ಮೂಲಕ ಅವಧಿ ಮುಗಿದ ಅಥವಾ ಅಕ್ರಮವಾಗಿ ಬಳಕೆಯಾಗುತ್ತಿರುವ ಸಿಲಿಂಡರ್ ಗಳನ್ನು ಪತ್ತೆ ಹಚ್ಚಿ ಸಿಲಿಂಡರ್‌ಗಳ ಸರಬರಾಜು ಚಕ್ರದ ಉತ್ತರದಾಯಿತ್ವವನ್ನು ಸುಧಾರಿಸುವ ನಿರೀಕ್ಷೆ ಹೊಂದಲಾಗಿದೆ.
ಹೊಸ ನಿಯಮಗಳಲ್ಲಿ ಅನಿಲ ಸಿಲಿಂಡರ್‌ಗಳ ಸುರಕ್ಷತೆಯ ಮಟ್ಟವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಅವುಗಳ ಸಂಗ್ರಹ, ಸಾಗಾಣಿಕೆ ಹಾಗೂ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಬಿಗುಗೊಳಿಸಲಾಗಿದೆ. ಇವುಗಳಲ್ಲಿ ಹೈಡ್ರೋಜನ್ ಗ್ಯಾಸ್ ಹಾಗೂ ಸಂಕುಚಿತ ಗ್ಯಾಸ್ (ಕಂಪ್ರೆಸ್‌ಡ್ ಗ್ಯಾಸ್) ಸಹ ಸೇರಿವೆ.
ಹೊಸ ಮಾರ್ಗಸೂಚಿಗಳಂತೆ ಈ ಅನಿಲಗಳನ್ನು ಹೇಗೆ ನಿರ್ವಹಿಸಬೇಕು, ವಿತರಿಣಾ ಕೇಂದ್ರಗಳಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಸಹ ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗಿದೆ.
ಸಬ್ಸಿಡಿ ಪಡೆಯುವ ಬಗೆ: ಮೇ 15ರಿಂದ ಎಲ್‌ಪಿಜಿ ಸಬ್ಸಿಡಿ ಪಡೆಯುವ ಬಗ್ಗೆ ಹೊಸ ನಿರ್ದೇಶನಗಳನ್ನು ನೀಡಲಾಗಿದೆ. ತಮ್ಮ ಎಲ್‌ಪಿಜಿಯನ್ನು ಆಧಾರ್ ನಂಬರ್ ಹಾಗೂ ಚಾಲೂ ಇರುವ ಬ್ಯಾಂಕ್ ಖಾತೆಗಳಿಗೆ ಜೋಡಣೆ ಮಾಡಿದವರಿಗೆ ಮಾತ್ರ ಇನ್ನು ಎಲ್‌ಪಿಜಿ ಸಬ್ಸಿಡಿ ದೊರೆಯುತ್ತದೆ. ಸಬ್ಸಿಡಿ ಹಣ ಇಂಥವರ ಡಿಬಿಟಿ ಖಾತೆಗಳಿಗೆ ನೇರವಾಗಿ ಜಮಾಗೊಳ್ಳುತ್ತದೆ.
ವಾರ್ಷಿಕ ಆದಾಯ 10 ಲಕ್ಷ ರೂ.ಗಳನ್ನು ಮೀರಿದ ಕುಟುಂಬಗಳು ಇನ್ನು ಮುಂದೆ ಎಲ್‌ಪಿಜಿ ಸಬ್ಸಿಡಿ ಪಡೆಯುವ ಅರ್ಹತೆ ಹೊಂದಿರುವುದಿಲ್ಲ. ಇದರೊಂದಿಗೆ ಎಲ್ಲಾ ಸಬ್ಸಿಡಿ ಪಡೆಯುವವರು ಕೆವೈಸಿ ಮಾಡಿರುವುದು ಕಡ್ಡಾಯವಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಇವರು ಕೆವೈಸಿ (ನೌ ಯುವಕ ಕಸ್ಟಮರ್) ಕಡ್ಡಾಯವಾಗಿ ನವೀಕರಿಸಬೇಕು. ಸಬ್ಸಿಡಿಯಲ್ಲಿ ವಂಚನೆಯನ್ನು ತಡೆಯಲು ಹಾಗೂ ಅರ್ಹ ಬಳಕೆದಾರರ ಖಾತೆಗೆ ನೇರವಾಗಿ ಸಬ್ಸಿಡಿ ಹಣ ಸಿಗುವಂತಾಗಲು ಈ ಕ್ರಮ ಕೈಗೊಳ್ಳಲಾಗಿದೆ.
ಉಚಿತ ಅನಿಲ ಸಿಲಿಂಡರ್ ಯೋಜನೆ: ಇದರೊಂದಿಗೆ ಎಲ್‌ಪಿಜಿ ಸಿಲಿಂಡರ್ ಹೊಂದಿರುವ ಬಿಪಿಎಲ್ ಕುಟುಂಬ ಹಾಗೂ ಈವರೆಗೆ ಎಲ್‌ಪಿಜಿ ಸಂಪರ್ಕ ಪಡೆಯದಿರುವ ಬಡ ಕುಟುಂಬಗಳಿಗೆ ಹೊಸ ಅಭಿವೃದ್ಧಿ ಯೋಜನೆಯನ್ನು ತರಲಾಗುತ್ತಿದೆ. ಈ ಸೌಲಭ್ಯವನ್ನು ಗ್ರಾಮೀಣ ಭಾಗದ ಹಾಗೂ ಅತ್ಯಂತ ಬಡ ಕುಟುಂಬಕ್ಕೆ ಗ್ರಾಮಪಂಚಾಯತ್‌ಗಳ ಮೂಲಕ ನೀಡಲಾಗುತ್ತದೆ.
ಗ್ರಾಮೀಣ ಭಾಗದಲ್ಲಿ ವಾಸಿಸುವ, ಪ್ರದಾನಮಂತ್ರಿ ಉಜ್ವಲ ಯೋಜನೆಯಂಥ ಸಾಮಾಜಿಕ ಸ್ಕೀಮ್‌ಗಳಲ್ಲಿ ನೊಂದಾಯಿತಗೊಂಡಿರುವ ಕುಟುಂಬಗಳಿಗೆ ಇದನ್ನು ನೀಡಲಾಗುತ್ತದೆ. ಇವರು ಕಟ್ಟಿಗೆ ಅಥವಾ ಇತರ ವಸ್ತುಗಳನ್ನು ಬಳಸಿ ಅಡುಗೆ ಮಾಡುವುದನ್ನು ಬಿಟ್ಟು ಎಲ್‌ಪಿಜಿ ಬಳಸುವಂತೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಕುಟುಂಬದ ಆರೋಗ್ಯವನ್ನು ಸುಧಾರಿಸುವುದು ಹಾಗೂ ವಾಯು ಮತ್ತು ಪರಿಸರ ಮಾಲಿನ್ಯವನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ.
ಅನಿಲ ಸಿಲಿಂಡರ್‌ಗಳಿಗೆ ಅನ್ವಯಿಸುವ ಹೊಸ ನಿಯಮಗಳು ಬಳಕೆದಾರರಿಗೆ ಹಲವು ಅವಕಾಶ ಗಳೊಂದಿಗೆ ಜವಾಬ್ದಾರಿಗಳನ್ನು ನೀಡುತ್ತದೆ. ಸುರಕ್ಷ ಸಿಲಿಂಡರ್, ಹೆಚ್ಚು ಪಾರದರ್ಶಕತೆ ಹಾಗೂ ಡಿಜಿಟಲ್ ಟ್ರ್ಯಾಕಿಂಗ್‌ನಿಂದ ಬಳಕೆದಾರರು ಹೆಚ್ಚು ಲಾಭವಾಗಲಿದೆ. ಇದರೊಂದಿಗೆ ಅವರು ಸಬ್ಸಿಡಿ ಪಡೆಯಲು ತಮ್ಮ ಎಲ್‌ಪಿಜಿ ಖಾತೆಯನ್ನು ಸರಿಯಾದ ಆಧಾರ್ ಹಾಗೂ ಬ್ಯಾಂಕ್ ಖಾತೆಯ ಮಾಹಿತಿ ಗಳೊಂದಿಗೆ ಅಪ್‌ಡೇಟ್ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ.
ಉಚಿತ ಅನಿಲ ಸಿಲಿಂಡರ್ ಯೋಜನೆಯಿಂದ ದೇಶದ ಗ್ರಾಮೀಣ ಭಾಗದ ಲಕ್ಷಾಂತರ ಕುಟುಂಬಗಳಿಗೆ ಲಾಭವಾಗುವ ನಿರೀಕೆ ಇದ್ದರೆ, ಸಬ್ಸಿಡಿ ಯೋಜನೆಯನ್ನು ಹೆಚ್ಚು ಬಿಗುಗೊಳಿಸುವುದರಿಂದ ಸರಕಾರಕ್ಕೂ ಹೆಚ್ಚು ಅನುಕೂಲವಾಗಲಿದೆ.
ಮೇ 10ರಿಂದ ಅನುಷ್ಠಾನಗೊಳ್ಳುವ ಹೊಸ ಅನಿಲ ಸಿಲಿಂಡರ್ ಯೋಜನೆಯಿಂದ ಸುರಕ್ಷ, ಪಾರದರ್ಶಕ ಹಾಗೂ ಪರಿಸರ ಸಹ್ಯ ಇಂಧನ ವ್ಯವಸ್ಥೆಯನ್ನು ಪರಿಣಾಮವಾಗಿ ಜಾರಿಗೊಳಿಸಲು ಸಾಧ್ಯವಾಗಲಿದೆ.ಇದು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಸರಕಾರದ ಸಂಪನ್ಮೂಲಗಳು ಪರಿಣಾಮಕಾರಿಯಾಗಿ ವಿತರಣೆಗೊಳ್ಳುವುದನ್ನು ಖಚಿತ ಪಡಿಸಲಿವೆ. ಅನಿಲ ಸಿಲಿಂಡರ್ ಬಳಕೆದಾರನ ಸುರಕ್ಷೆಯನ್ನು ಹೊಸ ನಿಯಮಗಳು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿರೀಕ್ಷೆ ಇದೆ.
(ವಿವಿಧ ಮೂಲಗಳಿಂದ)