×
Ad

ಹುತಾತ್ಮ ಯೋಧ ಅನೂಪ್ ಪೂಜಾರಿ ಬೀಜಾಡಿ ಪುಣ್ಯಸ್ಮರಣೆ

Update: 2025-12-25 19:04 IST

ಕುಂದಾಪುರ, ಡಿ.25: ದೇಶದ ರಕ್ಷಣೆಗೆ ಹೋರಾಡಿ ವೀರಮರಣವನ್ನಪ್ಪಿದ ಬೀಜಾಡಿಯ ಹೆಮ್ಮೆಯ ಪುತ್ರ ಅನೂಪ್ ಪೂಜಾರಿ ಬೀಜಾಡಿ ಅವರ ನೆನಪಿಗಾಗಿ 50 ಲಕ್ಷ ರೂ. ಅನುದಾನದೊಂದಿಗೆ ಭವ್ಯ ಸಭಾಂಗಣ ಹಾಗೂ ಅನೂಪ್ ಪುತ್ಥಳಿ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದು ಬೀಜಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಹೇಳಿದ್ದಾರೆ.

ಅವರು ಬುಧವಾರ ಸಂಜೆ ಬೀಜಾಡಿಯ ಕಡಲ ತೀರದಲ್ಲಿನ ವೀರ ಹುತಾತ್ಮ ಯೋಧ ಅನೂಪ್ ಪೂಜಾರಿ ಬೀಜಾಡಿ ಅವರ ಸಮಾಧಿ ಸ್ಥಳದಲ್ಲಿ ಹಮ್ಮಿಕೊಳ್ಳಲಾದ ಮೊದಲ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದರು.

ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ನಮ್ಮೂರಿನ ಹೆಮ್ಮೆಯ ಹುತಾತ್ಮ ಯೋಧ ಅನೂಪ್ ಪೂಜಾರಿಯ ಅಗಲಿಕೆ ನಮಗೆಲ್ಲ ಅತೀವ ದುಃಖ ತಂದಿದೆ. ಅವರ ಹೆಸರು ದೇಶ ಮಟ್ಟದಲ್ಲಿ ಶಾಶ್ವತವಾಗಿ ಉಳಿಯುವಲ್ಲಿ ನಾವೆಲ್ಲರೂ ಶ್ರಮವಹಿಸಬೇಕು. ಅದಕ್ಕಾಗಿ ಅವರ ಸಮಾಧಿ ಸ್ಥಳ ವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡುವುದರ ಜೊತೆಗೆ ನಾವೆಲ್ಲರೂ ಸ್ವಚ್ಛತೆಗೆ ಗಮನಕೊಡಬೇಕು. ಆ ಮೂಲಕ ಅನೂಪ್ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಬೇಕು ಎಂದರು.

ಆರಂಭದಲ್ಲಿ ಗ್ರಾಮಸ್ಥರು, ಅನೂಪ್ ಅಭಿಮಾನಿಗಳು ಹಣತೆ ಹಚ್ಚಿ ಪುಣ್ಯಸ್ಮರಣೆ ಮಾಡಿದರು. ಬಳಿಕ ಅನೂಪ್ ಪೂಜಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬೀಜಾಡಿ ಗೆಳೆಯರ ಬಳಗದ ವತಿಯಿಂದ ಅನೂಪ್ ಪೂಜಾರಿ ಸಮವಸ್ತ್ರದಲ್ಲಿರುವ ಭಾವಚಿತ್ರದ ಕೀ ಚೈನ್ ಬಿಡುಗಡೆ ಗೊಳಿಸಲಾಯಿತು. ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಅನೂಪ್ ಪೂಜಾರಿ ತಾಯಿಗೆ ಕೀ ಚೈನ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅನೂಪ್ ಪೂಜಾರಿ ತಾಯಿ ಹಾಗೂ ಮನೆಯವರು, ಬೀಜಾಡಿ ಗ್ರಾಮ ಪಂಚಾಯತ್ ಪಿಡಿಒ ಪ್ರಕಾಶ್ ಪೂಜಾರಿ, ಸದಸ್ಯರಾದ ಶೇಖರ ಜಾತ್ರೆಬೆಟ್ಟು, ಮಂಜುನಾಥ ಕುಂದರ್, ಸುಮತಿ ನಾಗರಾಜ್, ಅನಿಲ್ ಚಾತ್ರಬೆಟ್ಟು, ಪತ್ರಕರ್ತ ಗಣೇಶ್ ಬೀಜಾಡಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News