×
Ad

ಮಜೂರು ಗ್ರಾಪಂ ಬಜೆಟ್‌ನಲ್ಲಿ ಭಾರತೀಯ ಸೇನೆಗೆ 10 ಲಕ್ಷ ದೇಣಿಗೆ ಮೀಸಲು

Update: 2025-05-09 18:50 IST

ಕಾಪು, ಮೇ 9: ಭಾರತ- ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಗಮನಿಸಿ, ಪಾಕಿಸ್ತಾನದ ವಿರುದ್ದ ಯುದ್ದ ನಡೆಯುವ ಸಂದರ್ಭ ಎದುರಾದಲ್ಲಿ ರಾಷ್ಟ್ರ ಮತ್ತು ಸೈನಿಕರ ಹಿತದೃಷ್ಟಿಯಿಂದ ಮಜೂರು ಗ್ರಾಮ ಪಂಚಾಯತ್ ವಾರ್ಷಿಕ ಬಜೆಟ್‌ನಲ್ಲಿ ಎಲ್ಲಾ ಸದಸ್ಯರ ಒಪ್ಪಿಗೆಯ ಮೇರೆಗೆ 10 ಲಕ್ಷ ರೂ. ಮೊತ್ತವನ್ನು ಮೀಸಲಿರಿಸಲಾಗಿದೆ.

ಮಜೂರು ಗ್ರಾಮ ಪಂಚಾಯತ್ ಈ ಹಿಂದಿನಿಂದಲೂ ಉತ್ತಮ ಆಡಳಿತ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನ ದಲ್ಲಿರಿಸಿಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರು ನಡೆಸಿದ ದಾಳಿಗೆ ಪ್ರತಿಕಾರವಾಗಿ ಭಾರತ ಉಗ್ರರ ಅಡಗುತಾಣಗಳನ್ನು ದ್ವಂಸ ಮಾಡುತ್ತಿರುವುದು ಹೆಮ್ಮಯ ಸಂಗತಿ ಎಂದು ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಹಾಗೂ ಉಪಾಧ್ಯಕ್ಷೆ ಮಂಜುಳಾ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತ-ಪಾಕಿಸ್ತಾನ ನಡುವೆ ಯುದ್ದದ ವಾತಾವರಣ ನಿರ್ಮಾಣವಾಗಿದ್ದು, ಒಂದು ವೇಳೆ ಯುದ್ದ ನಡೆದರೆ ಭಾರತೀಯ ಸೈನ್ಯಕ್ಕೆ ಎಲ್ಲಾ ರೀತಿಯ ನೆರವು ನೀಡುವುದು ಗ್ರಾಮ ಪಂಚಾಯತ್ ಕರ್ತವ್ಯವಾಗಿದೆ. ಈ ಬಗ್ಗೆ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಜೊತೆ ಚರ್ಚಿಸಿದ್ದು, ಅವರು ದೇಶಕ್ಕೆ ಆಪತ್ತು ಎದುರಾದಾಗ ಪ್ರತಿಯೊಬ್ಬ ನಾಗರಿಕನು ಸೈನ್ಯದ ಜೊತೆ ಕೈಜೋಡಿಸ ಬೇಕು ಹಾಗೂ ಮಜೂರು ಗ್ರಾಮ ಪಂಚಾಯತ್ ತೆಗೆದುಕೊಂಡ ನಿರ್ಧಾರ ದೇಶದಲ್ಲೆ ಪ್ರಥಮ ಮತ್ತು ಐತಿಹಾಸಿಕ ನಿರ್ಣಯವಾಗಿದೆ. ಇದು ಇತರ ಪಂಚಾಯತ್‌ಗಳಿಗೂ ಪ್ರೇರಣೆಯಾಗಲಿದೆ ಎಂದು ಹೇಳಿರುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News