×
Ad

ಅತ್ತೂರು ವಾರ್ಷಿಕ ಮಹೋತ್ಸವ; 10 ಬಲಿಪೂಜೆಗಳು

Update: 2026-01-27 20:20 IST

ಕಾರ್ಕಳ, ಜ.27: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಸಹಸ್ರಾರು ಭಕ್ತಾದಿಗಳ ಭಕ್ತಿಭಾವದ ನಡುವೆ ಸುಮಾರು ಹತ್ತು ದಿವ್ಯ ಬಲಿಪೂಜೆಗಳು ನಡೆದವು.

ದಿನದ ಪ್ರಮುಖ ಹಾಗೂ ಆಢಂಬರದ ಸಾಂಭ್ರಮಿಕ ಬಲಿಪೂಜೆಯನ್ನು ಅಲಹಬಾದ್ ಧರ್ಮಪ್ರಾಂತ್ಯದ ಅತಿ ವಂ.ಲುವಿಸ್ ಮಸ್ಕರೇನ್ಹಸ್ ಅರ್ಪಿಸಿ, ನಾವೆಲ್ಲರು ಬಡವೆರೆಡೆಗೆ ನಮ್ಮ ಏಕಾಗ್ರತೆಯನ್ನು ನೀಡಬೇಕು. ಅವರೆಲ್ಲರು ಕ್ರಿಸ್ತನ ಪ್ರತಿರೂಪ. ಬಡವರೊಂದಿಗೆ ಕ್ರೈಸ್ತ ಜೀವನ ಸರಿದೂಗಿ ನಡೆಯಬೇಕು ಎಂದು ಸಂದೇಶ ನೀಡಿದರು. ವಿವಿಧ ಯಾಜಕರು ಸಹಭಾಗಿಯಾಗಿ, ಭಕ್ತಾದಿಗಳ ಸಮ್ಮುಖದಲ್ಲಿ ದಿವ್ಯ ಬಲಿಪೂಜೆ, ಆರಾಧನೆ ಮತ್ತು ವಿವಿಧ ಭಕ್ತಿಕಾರ್ಯಗಳನ್ನು ನೆರವೇರಿಸಿದರು.

ವಿವಿಧ ಧರ್ಮದ ಭಕ್ತರು ಕೂಡ ಮಹೋತ್ಸವದಲ್ಲಿ ಭಾಗವಹಿಸಿದ್ದು, ಭಕ್ತರು ಮೊಂಬತ್ತಿ ಬೆಳಗಿಸಿ, ಹರಕೆ ಸಲ್ಲಿಸಿ, ಸಂತ ಲಾರೆನ್ಸ್ ಅವರ ವಿಶೇಷ ಅವಶೇಷಗಳನ್ನು ಕಂಡು ಆಶೀರ್ವಾದ ಪಡೆದರು. ಪವಿತ್ರ ನೀರಿನ ಕೊಳದ ಬಳಿ ನೀರನ್ನು ಚಿಮುಕಿಸಿ, ಪುಷ್ಪಪ್ರಸಾದ ಹಾಗೂ ಪ್ರೋಕ್ಷ ತೀರ್ಥವನ್ನು ಸ್ವೀಕರಿಸಿದರು. ಮಹೋತ್ಸವಕ್ಕೆ ಹಲವು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದು, ಭಕ್ತಾದಿಗಳೊಂದಿಗೆ ಪ್ರಾರ್ಥನೆ ಸಲ್ಲಿಸಿದರು.

ಮಾಜಿ ಸಚಿವರಾದ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಪ್ರಮುಖರಾದ ಪದ್ಮರಾಜ್ ಹೆಗ್ಡೆ, ದಿನೇಶ್ ಹೆಗ್ಡೆ, ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹ, ನಿಯೋಜಿತ ಉಪಾಧ್ಯಕ್ಷ ವಂದೀಶ್ ಮಥಾಯಸ್, ನಿಯೋಜಿತ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ತೆಲಿನೊ, ಪಿಯುಸ್ ರೊಡ್ರಿಗಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News