×
Ad

ಸಾಸ್ತಾನ ಟೋಲ್‌ನಲ್ಲಿ ಮಾಜಿ ಯೋಧಗೆ ಅವಮಾನ ಪ್ರಕರಣ: ಕ್ರಮಕ್ಕೆ ಕೋಟ ಠಾಣೆಗೆ ಮನವಿ

Update: 2026-01-27 21:00 IST

ಕೋಟ, ಜ.27: ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ 21 ಪ್ಯಾರಾ ಕಮಾಂಡೋ ಸೈನಿಕರಿಗೆ ಸಾರ್ವಜನಿಕರ ಎದುರು ನಿಂದಿಸಿ ಅವಮಾನಿಸಿದ ಪ್ರಕರಣ ಸಂಬಂಧ ಟೋಲ್ ಪ್ಲಾಜಾ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಾಜಿ ಸೈನಿಕರ ಸಂಘ ಕೋಟ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿತು.

ಕಾಸರಗೋಡು ಜಿಲ್ಲೆಯ ನಿವೃತ್ತ ಯೋಧ ಶ್ಯಾಮರಾಜ್, ಅವರ ಪತ್ನಿ ಕೂಡ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ವರ್ಗಾವಣೆ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ವೇಳೆ ಸಾಸ್ತಾನ ಟೋಲ್‌ನಲ್ಲಿ ಟೋಲ್ ವಿನಾಯಿತಿ ಪತ್ರವಿದ್ದರೂ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿ ಅವಮಾನಿ ಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಹಿಂಜರಿಯದ ಸೈನಿಕರಿಗೆ ಈ ರೀತಿ ಅವಮಾನ ಮಾಡುವುದು ದೇಶಕ್ಕೆ ಮಾಡಿದ ಅವಮಾನ ಹಾಗೂ ದೇಶದ್ರೋಹದ ಸಮಾನ ಎಂದು ಮಾಜಿ ಸೈನಿಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಸಾಸ್ತಾನ ಟೋಲ್ ಯೋಜನಾ ಪ್ರಾಧಿಕಾರದ ಅಬ್ದುಲ್ ಜಾವೀದ್, ಜಗನ್ ಮೋಹನ್ ರೆಡ್ಡಿ, ಟೋಲ್ ಮ್ಯಾನೇಜರ್ ಬಾಬು, ತಿಮ್ಮಯ್ಯ ಹಾಗೂ ಸಿಬ್ಬಂದಿ ಸುರೇಶ್ ಮತ್ತು ಶಿವನಾಗ ವಿರುದ್ಧ ಕಾನೂನು ಕ್ರಮ ಕೈಗೊಳ್ಳು ವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸ್ವೀಕರಿಸಿದ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಈ ಕುರಿತು ಸಂಬಂಧಪಟ್ಟವರಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ನಡೆಸಿ ಮುಂದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೋಟ ಪೊಲೀಸ್ ಠಾಣೆಯ ಎಸ್ಸೈಗಳಾದ ಪ್ರವೀಣ್ ಕುಮಾರ್ ಆರ್., ಮಾಂತೇಶ್ ಜಾಭಗೌಡ ಹಾಜರಿದ್ದರು.

ನಿಯೋಗದಲ್ಲಿ ಮಾಜಿ ಸೈನಿಕರಾದ ಕೇಶವ ಮಲ್ಪೆ, ಚಂದ್ರ ಅಮೀನ್, ಅಶೋಕ, ಸುರೇಶ್, ಹೆದ್ದಾರಿ ಹೋರಾಟ ಸಮಿತಿಯ ಶ್ಯಾಮ್ ಸುಂದರ್ ನಾಯಿರಿ, ವಿಠಲ್ ಪೂಜಾರಿ, ಪ್ರತಾಪ್ ಶೆಟ್ಟಿ, ದಿನೇಶ್ ಗಾಣಿಗ, ನಾಗರಾಜ್ ಗಾಣಿಗ, ರವೀಂದ್ರ ತಿಂಗಳಾಯ, ರತ್ನಾಕರ ಬಾರಿಕೆರೆ, ಕೋಟ ಕೀರ್ತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News