ಪ್ರವಾಸಿ ಬೋಟ್ ದುರಂತ: ಶಾಸಕ ಯಶ್ಪಾಲ್ ಸುವರ್ಣ ಹೇಳಿಕೆಗೆ ಪ್ರಸಾದ್ ರಾಜ್ ಕಾಂಚನ್ ಟೀಕೆ
ಉಡುಪಿ, ಜ.27: ಕೋಡಿಬೆಂಗ್ರೆಯಲ್ಲಿ ನಡೆದ ಪ್ರವಾಸಿ ಬೋಟ್ ದುರಂತಕ್ಕೆ ಸಂಬಂಧಿಸಿ ಶಾಸಕ ಯಶ್ಪಾಲ್ ಸುವರ್ಣ ನೀಡಿರುವ ಹೇಳಿಕೆ ಕುಣಿಯಲಾಗದವ ನೆಲ ಡೊಂಕು ಎಂಬಂತಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಟೀಕಿಸಿದ್ದಾರೆ.
ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಹೊರಜಿಲ್ಲೆಯಿಂದ ಬಂದ ಪ್ರವಾಸಿಗರು ಬೋಟ್ ದುರಂತ ದಲ್ಲಿ ಸಾವಿಗೀಡಾಗಿರುವುದು ನೋವಿನ ವಿಚಾರವಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿ ಕೊಂಡು ಘಟನೆಯ ಕುರಿತು ಕೂಲಂಕುಷವಾದ ತನಿಖೆ ಮಾಡಲು ಸಹಕಾರ ನೀಡಬೇಕಾಗಿದ್ದ ಶಾಸಕರು ವೃತಾ ಹೇಳಿಕೆ ನೀಡುವ ಮೂಲಕ ತನಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುವುದು ಸರಿಯಲ್ಲ.
ಪ್ರಸ್ತುತ ಉಡುಪಿಯಲ್ಲಿ ಸ್ಥಳೀಯಾಡಳಿತ ಅಧಿಕಾರದಲ್ಲಿ ಇಲ್ಲ. ಕೋಡಿಬೇಂಗ್ರೆ ಉಡುಪಿ ಶಾಸಕರ ಆಡಳಿತ ವ್ಯಾಪ್ತಿಗೆ ಬರುತ್ತಿದ್ದು ಸರಕಾರದ ಅಡಿಯಲ್ಲಿ ಯಾವೆಲ್ಲ ಇಲಾಖೆಗಳು ಕಾರ್ಯಾಚರಿಸುತ್ತವೆಯೋ ಅದೆಲ್ಲವುದರ ಹೊಣೆಗಾರಿಕೆ ಇರುವುದು ಸ್ಥಳೀಯ ಶಾಸಕರಿಗೆ ಎನ್ನುವುದು ಅವರಿಗೆ ತಿಳಿದಿರುವ ವಿಚಾರವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯನ್ನು ಶಾಸಕರೇ ದೂರುವುದು ತಪ್ಪಾಗುತ್ತದೆ. ಜಿಲ್ಲಾಡಳಿತ ಅಥವಾ ಇಲಾಖೆಯಲ್ಲಿ ಸಮಸ್ಯೆಗಳು ಇದ್ದಲ್ಲಿ ಅದನ್ನು ಪರಿಹರಿಸಬೇಕಾಗಿರುವುದು ಸ್ಥಳೀಯ ಶಾಸಕರ ಜವಾಬ್ದಾರಿಯಾಗಿದೆ. ನಮ್ಮ ಉಡುಪಿ ಶಾಸಕರಿಗೆ ಆಡಳಿತ ನಡೆಸುವುದು ಹೇಗೆ ಎನ್ನುವುದು ಇನ್ನೂ ಕೂಡ ತಿಳಿದಿಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ಪ್ರಕಟಣೆಯಲ್ಲಿ ಪ್ರಸಾದ್‌ರಾಜ್ ಕಾಂಚನ್ ದೂರಿದ್ದಾರೆ.