ವಾರದಲ್ಲಿ ಐದು ದಿನಗಳ ಕೆಲಸ ಜಾರಿಗೆ ಆಗ್ರಹಿಸಿ ಬ್ಯಾಂಕ್ ಮುಷ್ಕರ
ಉಡುಪಿ: ಬ್ಯಾಂಕಿನಲ್ಲಿ ವಾರದಲ್ಲಿ ಐದು ದಿನಗಳ ಕೆಲಸ ಜಾರಿಗೆ ತರುವಂತೆ ಆಗ್ರಹಿಸಿ ಬ್ಯಾಂಕ್ ಅಧಿಕಾರಿಗಳ ಮತ್ತು ನೌಕರರ ಸಂಘಟನೆಯ ಒಕ್ಕೂಟ ಯುಎಫ್‌ಬಿಯು ನೇತೃತ್ವದಲ್ಲಿ ಮಂಗಳವಾರ ಮುಷ್ಕರ ನಡೆಸಲಾಯಿತು.
ಉಡುಪಿ ಜಿಲ್ಲಾ ಅಖಿಲ ಭಾರತೀಯ ಬ್ಯಾಂಕ್ ಸಂಘ (ಯುಎಫ್‌ಬಿಯು)ಗಳ ಮುಖಂಡರು ಉಡುಪಿ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯ ಮುಂದೆ ಧರಣಿ ನಡೆಸಿದರು. ವಾರದಲ್ಲಿ ಐದು ದಿನ ಮಾತ್ರ ಕೆಲಸದಲ್ಲಿ ತೊಡಗಿ ಸಿಕೊಂಡು ಉಳಿದ ಎರಡು ದಿನ ರಜೆ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಧರಣಿಯಲ್ಲಿ ಯುಎಫ್‌ಬಿಐ ಉಡುಪಿ ಜಿಲ್ಲಾ ಸಂಚಾಲಕ ನಾಗೇಶ್ ನಾಯಕ್ ಮಾತನಾಡಿ, ಬ್ಯಾಂಕ್ ನೌಕರರ ದೀರ್ಘ ಕಾಲದ ಪ್ರಮುಖ ಬೇಡಿಕೆಯಾದ ಐದು ದಿನಗಳ ಕೆಲಸ ವಾರ ಜಾರಿಗೆ ಸಂಬಂಧಿಸಿ ಈಗಾಗಲೇ ಲಿಖಿತ ಒಪ್ಪಂದವಾಗಿದ್ದು, ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಆದರೂ ಕೇಂದ್ರ ಸರಕಾರದಿಂದ ಈ ಬಗ್ಗೆ ಅಂತಿಮ ಅನುಮೋದನೆ ದೊರೆತಿಲ್ಲ ಎಂದು ದೂರಿದರು.
ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಉದ್ದೇಶದಿಂದ ಯುಎಫ್‌ಬಿಯು ಹಲವು ಬಾರಿ ರಾಜೀ ಸಂಧಾನ ಸಭೆಗಳಲ್ಲಿ ಭಾಗವಹಿಸಿ ಚರ್ಚೆ ನಡೆಸಿದೆ. ಆದರೆ ಕೇಂದ್ರ ಸರಕಾರದಿಂದ ಯಾವುದೇ ಸ್ಪಷ್ಟ ಭರವಸೆ ಅಥವಾ ಅಂತಿಮ ಅನುಮೋದನೆ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ಮುಷ್ಕರ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬ್ಯಾಂಕುಗಳು ಐದು ದಿನ ಕೆಲಸ ನಿರ್ವಹಿಸಿದರೆ ಗ್ರಾಹಕರಿಗೂ ಯಾವುದೇ ಸಮಸ್ಯೆ ಇಲ್ಲದ ಕಾರಣ ಸರಕಾರ ಈ ಕೂಡಲೇ ಈ ಬೇಡಿಕೆ ಈಡೇರಿಸಬೇಕು. ನಮ್ಮ ಬೇಡಿಕೆಗಳು ಕೇವಲ ನೌಕರರಿಗೆ ಮಾತ್ರವಲ್ಲ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆಗೆ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸಚಿನ್ ಶೆಟ್ಟಿ, ರಮೇಶ್, ಸುಪ್ರಿಯಾ, ಹರೀಶ್ ಶೆಟ್ಟಿ, ರವಿಶಂಕರ್, ಪ್ರದೀಪ್ ಕುಮಾರ್, ಮುರಳೀಧರ್, ಮರಿಯೊ ಮಥಾಯಸ್, ಶ್ಯಾಮಲಾ, ವಿಶಾಲ್ ಸಿಂಗ್, ನಿರಂಜನ್ ಆಚಾರ್ಯ, ಸೂರಜ್ ಉಪ್ಪೂರು, ಸೂರಜ್ ಮೊದಲಾದವರು ಉಪಸ್ಥಿತರಿದ್ದರು.
ಈ ಮುಷ್ಕರದಲ್ಲಿ ಜಿಲ್ಲೆಯಾದ್ಯಂತ ಸುಮಾರು 700 ಮಂದಿ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
‘ಪ್ರಸ್ತುತ ಬ್ಯಾಂಕ್ ಸಿಬ್ಬಂದಿಗಳು, ಸಿಬ್ಬಂದಿ ಕೊರತೆ ನಡುವೆ ಬಹುತೇಕ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣ ಕಟ್ಟಲು, ಹಿಂಪಡೆಯುವ ಸೌಲಭ್ಯಗಳನ್ನು ಎಟಿಎಂನಲ್ಲಿ ಕಲ್ಪಿಸಲಾಗಿದೆ. ಆನ್‌ಲೈನ್ ಬ್ಯಾಂಕಿಂಗ್ ಉಪಯೋಗಿಸಬಹುದಾಗಿದೆ. ಈಗಾಗಲೇ ಕೇಂದ್ರ ಸರಕಾರದ ನೌಕರರು ಇನ್ಸೂರೆನ್ಸ್, ಆರ್‌ಬಿಐ, ಸೇರಿದಂತೆ ಹಲವು ಸಂಸ್ಥೆಗಳಲ್ಲಿ ವಾರದಲ್ಲಿ ಐದು ದಿನ ಮಾತ್ರ ಕೆಲಸವಿದೆ. ಆದರೆ ಸರಕಾರದ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮತ್ತು ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಬ್ಯಾಂಕ್ ನೌಕರರಿಗೆ ವಾರಪೂರ್ತಿ ಕೆಲಸ ಒತ್ತಡಕ್ಕೆ ಕಾರಣವಾಗುತ್ತದೆ’
-ನಾಗೇಶ್ ನಾಯಕ್, ಸಂಚಾಲಕರು, ಯುಎಫ್‌ಬಿಯು ಉಡುಪಿ