×
Ad

ಉಡುಪಿ: ಮೇ 13ರ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮುಂದೂಡಿಕೆ

Update: 2025-05-08 16:56 IST

ಉಡುಪಿ: ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಮೇ 13ರಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾದ ವಕ್ಫ್ ತಿದ್ದುಪಡಿ ಕಾಯ್ದೆ-2025ರ ವಿರುದ್ಧದ ಪ್ರತಿಭಟನೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯ ಸೇನೆಗೆ ನೈತಿಕ ಬಲ ನೀಡಲು ಮತ್ತು ಕೇಂದ್ರ ಸರಕಾರಕ್ಕೆ ಮುಜುಗರವಾಗ ಬಾರದೆಂಬ ಉದ್ದೇಶದಿಂದ ಮುಂದೂಡಲಾಗಿದೆ ಎಂದು ಸಮಿತಿಯ ಸದಸ್ಯ ಮುಷ್ತಾಕ್ ಹೆನ್ನಾಬೈಲ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ-2025ರ ವಿರುದ್ಧ ಉಡುಪಿಯ ಮಿಷನ್ ಕಂಪೌಡಿನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿತ್ತು ಎಂದು ಹೇಳಿದರು.

ಈ ಕುರಿತು ಜಾತ್ಯತೀತ, ಸಂವಿಧಾನ ಪ್ರೇಮಿ, ಮನೋಭಾವದ ಸಮಾನ ಮನಸ್ಕ ಸಂಘನೆಗಳು, ರಾಜಕೀಯ ಪಕ್ಷಗಳು, ಚಿಂತಕರು ಮತ್ತು ಹೋರಾಟ ಗಾರರು ಒಂದುಗೂಡಿ ಹಲವಾರು ಪೂರ್ವಭಾವಿ ಸಭೆಗಳು ನಡೆಸಿ ಸಾಕಷ್ಟು ತಯಾರಿ ಮತ್ತು ಪ್ರಚಾರಗಳನ್ನು ನಡೆಸಲಾಯಿತು. ಪ್ರತಿಭಟನೆಗೆ ಪೊಲೀಸ್ ಇಲಾಖೆಯ ಅನುಮತಿಯನ್ನೂ ಪಡೆಯಲಾಗಿತ್ತು. ಜಾತಿ, ಧರ್ಮ, ಭಾಷೆ, ಪಂಗಡಗಳ ಭೇದವಿಲ್ಲದೆ ಜಿಲ್ಲೆಯ ಎಲ್ಲ ಭಾಗಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಕೇಂದ್ರ ಸರಕಾರದ ಈ ಕರಾಳ ಕಾಯ್ದೆಯನ್ನು ವಿರೋಧಿಸುವವರು ಮತ್ತು ಸಂವಿಧಾನ ಪ್ರೇಮಿಗಳು ಆಗಮಿಸುವ ನಿರೀಕ್ಷೆ ಇತ್ತು ಎಂದರು.

ಆದರೆ ಈ ಮಧ್ಯೆ ಕಾಶ್ಮೀರದ ಪೆಹಲ್ಗಾಮಿನಲ್ಲಿ ನಡೆದ ಉಗ್ರವಾದಿಗಳ ಭೀಕರ ಹತ್ಯಾಕಾಂಡಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಪಾಕಿಸ್ತಾನದಲ್ಲಿರುವ ಉಗ್ರವಾದಿ ನೆಲೆಗಳ ಮೇಲೆ ಯೋಜಿತ ಮತ್ತು ನಿಖರ ದಾಳಿಯನ್ನು ನಡೆಸಿತ್ತು. ಭಯೋತ್ಪಾದನೆಯ ವಿರುದ್ಧ ದೇಶ, ಶತ್ರು ರಾಷ್ಟ್ರದ ಭಯೋತ್ಪಾದಕ ನೆಲೆಯ ಮೇಲೆ ವೈಮಾನಿಕ ದಾಳಿ ನಡೆಸಿರುವ ಸಂದರ್ಭದಲ್ಲಿ ದೇಶದ ಸೇನೆಗೆ ನೈತಿಕ ಬಲ ನೀಡಲು ಮತ್ತು ಕೇಂದ್ರ ಸರಕಾರಕ್ಕೆ ಮುಜುಗರವಾಗದಂತೆ ಈ ಪ್ರತಿಭಟನೆಯನ್ನು ಮುಂದೂಡಲಾಗುತ್ತಿದೆ ಎಂದು ಅವರು ತಿಳಿಸಿದರು.

ದೇಶದೊಳಗೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಕಾರಣಗಳಿಂದಾಗಿ ಸರಕಾರದೊಂದಿಗೆ ಅಭಿಪ್ರಾಯ ಭೇದ ಅಥವಾ ವಿರೋಧವಿದ್ದರೂ, ಇಂತಹ ಪರಿಸ್ಥಿತಿಗಳಿಂದಾಗಿ ದೇಶದ ಸೇನೆಯ ನೈತಿಕ ಸ್ಥೈರ್ಯ ಕುಗ್ಗಬಾರದು ಮತ್ತು ಸರಕಾರದ ನೀತಿಗಳನ್ನು ವಿರೋಧಿಸುವ ಪ್ರತಿಭಟನೆಗಳು ಜಾಗತಿಕ ಮಟ್ಟದಲ್ಲಿ ದೇಶದ ವರ್ಚಸ್ಸಿಗೆ ಧಕ್ಕೆ ತರಬಾರದು ಎಂಬ ಸದುದ್ದೇಶವನ್ನು ಇಟ್ಟುಕೊಂಡು ಸಮಿತಿಯು ಸಭೆ ಸೇರಿ ಪ್ರತಿಭಟನೆಯನ್ನು ಮುಂದೂಡುವ ನಿರ್ಧಾರವನ್ನು ಕೈಗೊಂಡಿದೆ. ಶೀಘ್ರದಲ್ಲೇ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉದ್ಯಾವರ ನಾಗೇಶ್ ಕುಮಾರ್, ಮುಹಮ್ಮದ್ ಇದ್ರೀಸ್ ಹೂಡೆ, ರಮೇಶ್ ಕಾಂಚನ್, ರಿಯಾಝ್ ಕೋಡಿ, ಇಸ್ಮಾಯಿಲ್ ಹುಸೇನ್, ಸುಂದರ್ ಮಾಸ್ತರ್, ಬಿಎಸ್‌ಎಫ್ ರಫೀಕ್, ಅಝೀಝ್ ಉದ್ಯಾವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News