ಡಿ.29, 30: ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ
ಉಡುಪಿ: ರಂಗಭೂಮಿ ಉಡುಪಿ ವತಿಯಿಂದ ಈ ವರ್ಷದ ರಂಗಭೂಮಿ ರಂಗ ಶಿಕ್ಷಣ ಅಭಿಯಾನದಲ್ಲಿ ಉಡುಪಿ ನಗರದ ಆಯ್ದ 11 ಪ್ರೌಢಶಾಲೆಗಳ 250ಕ್ಕೂ ಅಧಿಕ ಮಕ್ಕಳ ಭಾಗವಹಿಸುವಿಕೆಯಲ್ಲಿ 11 ಹೆಸರಾಂತ ನಿರ್ದೇಶಕರಿಂದ ತಯಾರಾದ 11 ಕಿರು ನಾಟಕಗಳ ಪ್ರದರ್ಶನ ‘ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ’ ಡಿ.29 ಮತ್ತು ಡಿ.30 ರಂದು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಂಗಬೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ರಂಗಭೂಮಿ ತನ್ನ 60ನೇ ವರ್ಷದ ಪ್ರಯುಕ್ತ ಮಕ್ಕಳ ರಂಗಭೂಮಿಗೆ ಉತ್ತೇಜನ ನೀಡಲು ಪ್ರೌಢ ಶಾಲೆಗಳಲ್ಲಿ ಪ್ರಾರಂಭಿಸಿದ ಮಕ್ಕಳ ರಂಗಶಿಕ್ಷಣದಲ್ಲಿ ಉಡುಪಿಯ ಆಸುಪಾಸಿನ 12 ಶಾಲೆಗಳ 350ಕ್ಕೂ ಅಧಿಕ ಮಕ್ಕಳ ಪಾಲ್ಗೊಂಡಿದ್ದರು ಎಂದರು.
ರಂಗಶಿಕ್ಷಣ ಪಡೆದ ಶಾಲೆಗಳ ಮಕ್ಕಳ ನಾಟಕೋತ್ಸವ ಕಾರ್ಯಕ್ರಮವನ್ನು ಡಿ.29ರ ಸೋಮವಾರ ಬೆಳಗ್ಗೆ 9:30ಕ್ಕೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಉದ್ಘಾಟಿಸಲಿದ್ದಾರೆ. ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಭುವನೇಂದ್ರ ಕಿದಿಯೂರು, ಹರಿಪ್ರಸಾದ್ ರೈ, ಎಂಜಿಎಂ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಎಂ.ವಿಶ್ವನಾಥ ಪೈ, ರಂಗಶಿಕ್ಷಣ ಅಭಿಯಾನ ಸಂಚಾಲಕ ವಿದ್ಯಾವಂತ ಆಚಾರ್ಯ ಉಪಸ್ಥಿತರಿರುವರು.
ಸಮಾರೋಪ ಡಿ.30 ಮಂಗಳವಾರ ಅಪರಾಹ್ನ 12:00 ಗಂಟೆಗೆ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ ಸಮಾರೋಪ ಭಾಷಣ ಮಾಡಲಿದ್ದಾರೆ. ಉದ್ಯಮಿಗಳಾದ ಜಮಾಲುದ್ದೀನ್ ಅಬ್ಬಾಸ್, ಅಲಯನ್ಸ್ ಜಿಲ್ಲಾ ಗವರ್ನರ್ ಸುನೀಲ್ ಸಾಲ್ಯಾನ್, ಉದ್ಯಮಿ ಪೆರ್ಣಂಕಿಲ ಶ್ರೀಶ ನಾಯಕ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಉಪಸ್ಥಿತರಿರುವರು ಎಂದರು.
ಯಾವೆಲ್ಲಾ ನಾಟಕಗಳು?: ಎರಡು ದಿನಗಳಲ್ಲಿ ಈ ಬಾರಿಯ ಅಭಿಯಾನದಲ್ಲಿ ಭಾಗವಹಿಸಿರುವ 11 ಶಾಲೆಗಳ ವಿದ್ಯಾರ್ಥಿಗಳು 30 ನಿಮಿಷದಿಂದ ಗರಿಷ್ಠ 45 ನಿಮಿಷಗಳ ಕಿರು ನಾಟಕಗಳನ್ನು ಪ್ರದರ್ಶಿಸಲಿದ್ದಾರೆ. 29ರ ಮೊದಲ ದಿನ ಆರು ನಾಟಕಗಳು ಪ್ರದರ್ಶನಗೊಂಡರೆ, ಎರಡನೇ ದಿನ ಐದು ನಾಟಕಗಳು ನಡೆಯಲಿವೆ.
ಡಿ.29ರಂದು ಬೆಳಗ್ಗೆ 10:45ಕ್ಕೆ ಕುಂಜಿಬೆಟ್ಟು ಶಾರದಾ ರೆಸಿಡೆನ್ಶಿಯಲ್ ಸ್ಕೂಲಿನ ಮಕ್ಕಳಿಂದ ‘ಪುಷ್ಪರಾಣಿ’, 11:45ಕ್ಕೆ ಕಲ್ಯಾಣಪುರ ಮಿಲಾಗ್ರಿಸ್ ಪ್ರೌಢಶಾಲೆಯ ಮಕ್ಕಳಿಂದ ‘ಕಾಡಿನ ಪಕ್ಷಿ ಪ್ಯಾಟೆಗೆ ಬಂತು’, ಅಪರಾಹ್ನ 12:45ಕ್ಕೆ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲಿನ ಮಕ್ಕಳಿಂದ ‘ಅಳಿಲು ಮರಿಯ ಹೊರಳು ಸೇವೆ’, 2:30ಕ್ಕೆ ಆದಿಉಡುಪಿ ಪ್ರೌಢಶಾಲೆ ಮಕ್ಕಳಿಂದ ‘ಲಂಬಕರ್ಣನ ಉಷ್ಣೇಶ’, 3:30ಕ್ಕೆ ಉಡುಪಿ ಬೋರ್ಡ್ ಹೈಸ್ಕೂಲ್ ಮಕ್ಕಳಿಂದ ‘ಕಾವ್ಯ ಕಥಾನಾಟಕ’ ಹಾಗೂ ಸಂಜೆ 4:30ಕ್ಕೆ ಮಣಿಪಾಲ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಮಕ್ಕಳಿಂದ ‘ಕಾಮನ್‌ಸೆನ್ಸ್’ ನಾಟಕ ಪ್ರದರ್ಶನಗೊಳ್ಳಲಿವೆ.
ಡಿ.30ರಂದು ಬೆಳಗ್ಗೆ 9:30ಕ್ಕೆ ಉಡುಪಿ ಬೈಲಕೆರೆ ಶ್ರೀಅನಂತೇಶ್ವರ ಪ್ರೌಢ ಶಾಲೆ ಮಕ್ಕಳಿಂದ ‘ಒಮ್ಮೆ ಸಿಕ್ಕರೆ’, 11:00ಕ್ಕೆ ನಿಟ್ಟೂರು ಪ್ರೌಢಶಾಲಾ ಮಕ್ಕಳಿಂದ ‘ಕತ್ತಲೆ ನಗರ ತಲೆಕೆಟ್ಟ ರಾಜ’, ಅಪರಾಹ್ನ 2:00ಕ್ಕೆ ಕುಂಜಿಬೆಟ್ಟು ಟಿಎ ಪೈ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ‘ತಾರೆ’, 3:00ಕ್ಕೆ ಸೈಂಟ್ ಸಿಸಿಲೀಸ್ ಪ್ರೌಢಶಾಲೆ ಮಕ್ಕಳಿಂದ ‘ಅಳಿಲು ರಾಮಾಯಣ’ ಹಾಗೂ ಸಂಜೆ 4:00ಕ್ಕೆ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ‘ಎಂಡ್ ಇಲ್ಲದ ಬಂಡ್ ಅವತಾರ’ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಪತ್ರಿಕಾ ಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.