ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್‌ನಿಂದ ಕೊರಗರಿಗೆ 14 ಮನೆ ನಿರ್ಮಾಣ; ಡಿ.25ರಂದು ಲೋಕಾರ್ಪಣೆ
ಉಡುಪಿ, ಡಿ.23: ಸಮಾಜಸೇವಕ, ಉದ್ಯಮಿ ಡಾ.ಎಚ್.ಎಸ್.ಶೆಟ್ಟಿ ಸಾರಥ್ಯದಲ್ಲಿ ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಕುಂದಾಪುರ ತಾಲೂಕಿನ ಉಳ್ಳೂರು ಕೊರಗರ ಕಾಲೋನಿಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 14 ಮನೆಗಳ ಲೋಕಾರ್ಪಣೆ ಕಾರ್ಯ ಇದೇ ಡಿ.25ರಂದು ಬೆಳಗ್ಗೆ 10:30ಕ್ಕೆ ನಡೆಯಲಿದೆ ಎಂದು ಡಾ.ಎಚ್.ಎಸ್.ಶೆಟ್ಟಿ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಟ್ರಸ್ಟ್ ಈಗಾಗಲೇ ಬಿದ್ಕಲ್‌ಕಟ್ಟೆ ಸಮೀಪ ಕೊರಗರಿಗೆ 14 ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಹಸ್ತಾಂತರ ಮಾಡಿತ್ತು. ಇದೀಗ 74 ಉಳ್ಳೂರು ಗ್ರಾಮದಲ್ಲಿ ಮತ್ತೆ 14 ಮನೆಗಳನ್ನು ನಿರ್ಮಿಸಿದೆ. ಮುಂದೆ ಅಮಾಸೆಬೈಲು ಹಾಗೂ ಮಂದಾರ್ತಿ ಗಳಲ್ಲಿ ಕೊರಗರ ಕಾಲೋನಿಯಲ್ಲಿ ತಲಾ 14 ಮನೆಗಳನ್ನು ನಿರ್ಮಿಸಲಾಗುತ್ತದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಕೊರಗರಿಗಾಗಿ 100 ಮನೆಗಳನ್ನು ಟ್ರಸ್ಟ್ ಮೂಲಕ ನಿರ್ಮಿಸಿಕೊಡುವ ಗುರಿಯನ್ನು ಹಾಕಿಕೊಳ್ಳ ಲಾಗಿದೆ ಎಂದು ಅವರು ವಿವರಿಸಿದರು.
ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬೆಳಗ್ಗೆ 10:30ಕ್ಕೆ ಗೃಹಪೂಜೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಚಿತ್ರದುರ್ಗದ ಮಾರಾ ಚೆನ್ನಯ್ಯ ಗುರುಪೀಠದ ಶ್ರೀಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಮನೆಗಳ ಲೋಕಾರ್ಪಣೆಗೊಳಿಸಿ ಆಶಯ ಭಾಷಣ ಮಾಡಲಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರದಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದಾರೆ ಎಂದರು.
ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ವೈ.ಭರತ್ ಶೆಟ್ಟಿ ಪಾಲ್ಗೊಳ್ಳುವರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಕರ್ನಾಟಕ ಮತ್ತು ಕೇರಳ ಕೊರಗಾಭಿವೃದ್ಧಿ ಸಂಸ್ಥೆಗಳ ಅಧ್ಯಕ್ಷ ಸುಶೀಲ ನಾಡ, ಉಳ್ಳೂರು ಗ್ರಾಪಂ ಅಧ್ಯಕ್ಷೆ ಕುಸುಮಾ ಶೆಟ್ಟಿ, ರೈತ ನಾಯಕ ಸಂಜೀವ ಶೆಟ್ಟಿ ಸಂಪಿಗೇಡಿ ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಸಂಚಾಲಕ ಪ್ರಮೋದ್, ಉಳ್ಳೂರು ಗ್ರಾಪಂ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕೃಷ್ಣ ಪೂಜಾರಿ, ಶ್ರೀನಿವಾಸ ಮುಂತಾದವರು ಉಪಸ್ಥಿತರಿದ್ದರು.