×
Ad

ಕೊಲ್ಲೂರು: ಮಾ.15ರಿಂದ 24ರವರೆಗೆ ಜಾತ್ರೆ, ಶ್ರೀಮನ್ಮಹಾರಥೋತ್ಸವ

Update: 2025-03-13 21:50 IST

ಕುಂದಾಪುರ, ಮಾ.13: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಮಾ.15ರಿಂದ ಮಾ.24ರ ವರೆಗೆ ಜಾತ್ರಿ ಹಾಗೂ ಶ್ರೀಮನ್ಮಹಾರಥೋತ್ಸವವನು ಹಮ್ಮಿಕೊಳ್ಳಲಾಗಿದೆ. ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಿಳಿಸಿದ್ದಾರೆ.

ದೇವಳದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.15ರಂದು ಗಣಪತಿ ಪ್ರಾರ್ಥನೆ ಯೊಂದಿಗೆ ವಾರ್ಷಿಕ ಜಾತ್ರೆಯ ಧಾರ್ಮಿಕ ವಿಧಿಗಳು ಆರಂಭಗೊಳ್ಳುತ್ತದೆ. ಧ್ವಜಾರೋಹಣ, ಯಾಗ ಶಾಲೆ ಪ್ರವೇಶ, ಭೇರಿ ತಾಡನ, ಕೌತುಕ ಬಂಧನ ಹಾಗೂ ನಗರೋತ್ಸವ ನಡೆಯಲಿದೆ. ಮಾ.16 ರಿಂದ 21 ರವರೆಗೆ ಪ್ರತಿ ದಿನ ರಾತ್ರಿ ಮಯೂರ, ಡೋಲಾ, ಪುಷ್ಪಮಂಟಪ, ವೃಷಭ, ಗಜ, ಸಿಂಹ ವಾಹನೋತ್ಸವದ ಪುರಮೆರವಣಿಗೆ ಓಲಗ ಮಂಟಪದವರೆಗೂ ನಡೆಯಲಿದೆ ಎಂದರು.

ಪ್ರತಿ ದಿನ ಸಂಜೆ ಕಟ್ಟೆ ಉತ್ಸವ, ಸ್ವರ್ಣಮುಖಿ ರಂಗ ಮಂದಿರದಲ್ಲಿ ದೇಶದ ವಿವಿಧ ಭಾಗದ ಕಲಾವಿದರು ಗಳಿಂದ ಸೇವಾ ರೂಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.22ರಂದು ಬೆಳಿಗ್ಗೆ 11.15ಕ್ಕೆ ರಥಾರೋಹಣ ಹಾಗೂ ಸಂಜೆ 4ಕ್ಕೆ ರಥ ಅವರೋಹಣ ನಡೆಯಲಿದೆ. ಮಾ.23ಕ್ಕೆ ಓಕುಳಿ ಉತ್ಸವ, ತೆಪ್ಪೋತ್ಸವ ಹಾಗೂ ಅವಭೃತ ಸ್ನಾನ ನಡೆಯಲಿದೆ. ಮಾ.24ರಂದು ಬೆಳಿಗ್ಗೆ 7ಕ್ಕೆ ಅಶ್ವಾರೋಹ ಣೋತ್ಸವದಲ್ಲಿ ಶ್ರೀದೇವಿಯನ್ನು ಕರೆತಂದು ಸರಸ್ವತಿ ಮಂಟಪದಲ್ಲಿ ಕುಳ್ಳಿರಿಸಿ, ಯಾಗ ಶಾಲೆಯಲ್ಲಿ ಶಾಂತಿ ತತ್ವ ಕಲಾಭಿವೃದ್ಧಿ ಹೋಮದ ಪೂರ್ಣಾಹುತಿ ನಡೆಸಲಾಗುವುದು.

ಆರೋಗ್ಯ, ವಸತಿ, ನೈರ್ಮಲ್ಯ, ಉಟೋಪಚಾರ, ನೀರು ಸೇರಿದಂತೆ ಜಾತ್ರೆಗೆ ಬರುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ತಂತ್ರಿ ಕೆ.ನಿತ್ಯಾನಂದ ಅಡಿಗ, ಮಹಾಲಿಂಗ ವೆಂಕ ನಾಯ್ಕ್, ಧನಾಕ್ಷಿ, ಸುಧಾ ಕೆ, ಸುರೇಂದ್ರ ಶೆಟ್ಟಿ, ಅಭಿಲಾಷ್ ಪಿ.ವಿ, ಯು.ರಾಜೇಶ್ ಕಾರಂತ್, ರಘುರಾಮ ದೇವಾಡಿಗ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಅರ್ಚಕರು, ಸಿಬ್ಬಂದಿಗಳು, ಭಕ್ತರು ಹಾಗೂ ಸ್ಥಳೀಯರ ಸಹಕಾರದಲ್ಲಿ ಪೂರ್ವ ಸಿದ್ದತೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News