×
Ad

ಮೇ 16ರಂದು ಕರಾವಳಿಯ ‘ಲೈಟ್‌ಹೌಸ್’ ಚಿತ್ರ ತೆರೆಗೆ

Update: 2025-05-14 21:31 IST

ಉಡುಪಿ, ಮೇ 14: ಕರಾವಳಿಯ ನಿರ್ಮಾಪಕರು ಹಾಗೂ ನಿರ್ದೇಶಕರ ಮೂಲಕ, ಕರಾವಳಿಯ ಪ್ರತಿಭಾವಂತ ಕಲಾವಿದರೇ ಅಭಿನಯಿಸಿದ ಕನ್ನಡ ಚಲನಚಿತ್ರ ‘ಲೈಟ್‌ಹೌಸ್’ ಇದೇ ಮೇ 16ರಂದು ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ತಿಳಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾವಳಿ ಭಾಗದ ಕಲೆ, ಸಂಸ್ಕೃತಿ, ಆಚಾರ-ವಿಚಾರಗಳೊಂದಿಗೆ ಇಡೀ ಕುಟುಂಬ ಸಮೇತ ವೀಕ್ಷಿಸಬಹುದಾದ ಚಿತ್ರವನ್ನು ನಿರ್ಮಿಸಲಾಗಿದೆ. ಇದರಲ್ಲಿ ಇಡೀ ಸಮಾಜಕ್ಕೆ ಉತ್ತಮವಾದ ಸಂದೇಶಗಳಿವೆ ಎಂದರು.

ಕನ್ನಡ ಮಾಧ್ಯಮ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು, ನೇತ್ರದಾನದ ಮಹತ್ವ, ಕರಾವಳಿಯ ಕಲೆ-ಸಂಸ್ಕೃತಿಯನ್ನು ಚಿತ್ರದಲ್ಲಿ ವಿಶೇಷವಾಗಿ ಚಿತ್ರೀಕರಿಸಲಾಗಿದೆ. ಚಿತ್ರದ ಚಿತ್ರೀಕರಣ ಉಡುಪಿ ಆಸುಪಾಸಿನಲ್ಲಿ ನಡೆದಿದೆ ಎಂದು ಸಂದೀಪ್ ಕಾಮತ್ ವಿವರಿಸಿದರು.

ಚಿತ್ರದ ನಿರ್ಮಾಪಕ ದತ್ತಾತ್ರೇಯ ಪಾಟ್ಕರ್ ಬಂಟಕಲ್ಲು ಮಾತನಾಡಿ ಮೇ 16ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಹೆಸರಾಂತ ಕಲಾವಿದರಾದ ಶೋಭರಾಜ್ ಪಾವೂರು, ಮಾನಸಿ ಸುಧೀರ್, ಪ್ರಕಾಶ್ ತೂಮಿನಮಾಡು, ದೀಪಕ್ ರೈ ಪಾಣಾಜೆ, ಪೃಥ್ವಿ ಅಂಬರ್, ರಾಹುಲ್ ಅಮೀನ್, ಶೈಲಶ್ರೀ ಮುಲ್ಕಿ, ಶೀತಲ್ ನಾಯಕ್, ಅಚಲ್ ಬಂಗೇರ ಮುಂತಾದವರು ಪಾತ್ರ ನಿರ್ವಹಿಸಿದ್ದಾರೆ ಎಂದರು.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಚಿತ್ರಕ್ಕೆ ಕಾರ್ತಿಕ್ ಮುಲ್ಕಿ ಸಂಗೀತ ನಿರ್ದೇಶನವಿದೆ. ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನು ಪ್ರಜ್ವಲ್ ಸುವರ್ಣ ನಿರ್ವಹಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪುಂಡಲೀಕ ಮರಾಠೆ ಬಂಟಕಲ್ಲು, ರೋಹನ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News