×
Ad

ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಜೂ.19-20ರಂದು ಸಾಕ್ಷಿಗಳ ವಿಚಾರಣೆಗೆ ದಿನ ನಿಗದಿ

Update: 2025-04-25 22:53 IST

ಪ್ರವೀಣ್ ಚೌಗುಲೆ

ಉಡುಪಿ, ಎ.25: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಭೀಕರ ಹತ್ಯೆ ಪ್ರಕರಣದ ಸಾಕ್ಷಿಗಳ ವಿಚಾರಣೆಗೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಜೂ.19 ಮತ್ತು ಜೂ.20ರಂದು ದಿನ ನಿಗದಿ ಪಡಿಸಿದೆ.

ಪ್ರಕರಣದ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ಮತ್ತು ವಿಡಿಯೋ ದಾಖಲಿಸಬೇಕೆಂಬ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಈ ನಿಟ್ಟಿನಲ್ಲಿ ಸದ್ಯ ಸಾಕ್ಷಿಗಳ ವಿಚಾರಣೆಗೆ ದಿನ ನಿಗದಿ ಪಡಿಸುವುದು ಬೇಡ ಎಂದು ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ, ಈ ಸಂಬಂಧ ವಿಚಾರಣೆಗೆ ಹೈಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ಈ ಪ್ರಕರಣದ ಸಾಕ್ಷಿಗಳ ವಿಚಾರಣೆ ಕಳೆದ ಜೂನ್ ತಿಂಗಳಲ್ಲಿಯೇ ಆರಂಭ ವಾಗಬೇಕಿತ್ತು. ಆದರೆ ಆರೋಪಿ ಒಂದಲ್ಲ ಒಂದು ಕಾರಣ ನೀಡಿ, ಅದನ್ನು ಮುಂದೂಡುತ್ತಿದ್ದಾರೆ. ಇದರಿಂದ ಸಂತ್ರಸ್ತರಿಗೆ ನ್ಯಾಯ ವಿಳಂಬವಾಗುತ್ತಿದೆ. ಆದುದರಿಂದ ಇವತ್ತೇ ಸಾಕ್ಷಿಗಳ ವಿಚಾರಣೆಗೆ ದಿನ ನಿಗದಿಪಡಿಸಬೇಕೆಂದು ಹೇಳಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಸಮಿವುಲ್ಲಾ, ಜೂ.19ರಂದು ದೂರುದಾರೆ ಹಾಗೂ ಒಂದನೇ ಸಾಕ್ಷಿಯ ವಿಚಾರಣೆ ಮತ್ತು ಜೂ.20ರಂದು ಎರಡು ಮತ್ತು ಮೂರನೇ ಸಾಕ್ಷಿಗಳ ವಿಚಾರಣೆಗೆ ದಿನ ನಿಗದಿಪಡಿಸಿದರು. ಆ ದಿನದಂದು ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಖುದ್ಧು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅವರು ಆದೇಶ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News